ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಬೊಜ್ಜಿನ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅಡುಗೆ ಎಣ್ಣೆ ಕಡಿಮೆ ಬಳಸಿ ಎಂದು ಕೂಡ ಕರೆ ನೀಡಿದ್ದರು. ಇದರ ಬೆನ್ನಲ್ಲೇ, ಜನರ ಬೊಜ್ಜನ್ನು ಕ್ಷಿಪ್ರವಾಗಿ ಕರಗಿಸುವ ಮಾತ್ರೆಯೊಂದು ದೇಶದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಮೆರಿಕದ ಎಲಿ ಲಿಲ್ಲಿ ಎಂಬ ಕಂಪನಿಯು ಮೌಂಜಾರೋ ಎಂಬ ಮಾತ್ರೆಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಮೂರು ಬಗೆಯ ಮಾತ್ರೆಗಳನ್ನು ಎಲಿ ಲಿಲ್ಲಿ ಎಂಬ ಕಂಪನಿಯು ಬಿಡುಗಡೆ ಮಾಡಿದೆ. ಐದು ಎಂಜಿ ಮಾತ್ರೆಗಳಿರುವ ಒಂದು ಬಾಟಲಿಗೆ 4,375 ಕೋಟಿ ರೂ. ಫಿಕ್ಸ್ ಮಾಡಲಾಗಿದೆ. 2.5 ಎಂಜಿ ಮಾತ್ರೆಗಳುಳ್ಳ ಬಾಟಲಿಗೆ 3,500 ರೂ. ನಿಗದಿಪಡಿಸಲಾಗಿದೆ. 5 ಎಂಜಿಯ ಮಾತ್ರೆಗಳ ಒಂದು ಕೋರ್ಸ್ ಮುಗಿಸಲು ತಿಂಗಳಿಗೆ 17,500 ರೂ. ಆದರೆ, 2.5 ಎಂಜಿಯ ಕೋರ್ಸಿಗೆ14 ಸಾವಿರ ರೂ. ಆಗುತ್ತದೆ ಎಂದು ತಿಳಿದುಬಂದಿದೆ. ಇನ್ನು ಗರಿಷ್ಠ 15 ಎಂಜಿಯ ಮಾತ್ರೆಗಳೂ ಇವೆ. ಆದಾಗ್ಯೂ, ಮೌಂಜಾರೋ ಮಾತ್ರೆಗಳ ಸೇವನೆಯಿಂದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಏನೆಲ್ಲ ಸೈಡ್ ಎಫೆಕ್ಟ್ ಆಗಲಿವೆ ಎಂಬುದರ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ. ವೈದ್ಯರ ಸೂಚನೆ ಇಲ್ಲದೆ ಇವುಗಳನ್ನು ತೆಗೆದುಕೊಳ್ಳಬಾರದು ಎಂದು ಕೂಡ ತಜ್ಞರು ಸಲಹೆ ನೀಡಿದ್ದಾರೆ.
ದೇಶದಲ್ಲಿ 10 ಕೋಟಿ ಜನರಿಗೆ ಬೊಜ್ಜಿನ ಸಮಸ್ಯೆ
ಭಾರತದಲ್ಲಿ ಜನರಿಗೆ ಸ್ಥೂಲಕಾಯದ ಸಮಸ್ಯೆ ಗಂಭೀರವಾಗಿ ಕಾಡುತ್ತಿದೆ. ದೇಶದಲ್ಲಿ ಈಗಾಗಲೇ ಸುಮಾರು 10 ಕೋಟಿಗೂ ಅಧಿಕ ಜನರಿಗೆ ಬೊಜ್ಜಿನ ಸಮಸ್ಯೆ ಕಾಡುತ್ತಿದೆ. ಬೊಜ್ಜಿನಿಂದಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮಿದುಳು ರಕ್ತಸ್ರಾವ, ಕೊಬ್ಬಿದ ಯಕೃತ್ತಿನ ಕಾಯಿಲೆ (ಎನ್ಎಎಫ್ಎಲ್ಡಿ), ಸ್ತನ ಕ್ಯಾನ್ಸರ್, ನಿದ್ರಾಹೀನತೆ, ಮೂಳೆ ಸವೆತ, ಕೀಲು ನೋವು ಸೇರಿ ಹಲವು ಕಾಯಿಲೆಗಳು ಒಕ್ಕರಿಸಿಕೊಳ್ಳುತ್ತಿವೆ.
ಲಾನ್ಸೆಟ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಭಾರತದಲ್ಲಿ 2050ರ ವೇಳೆಗೆ ಬೊಜ್ಜಿನಿಂದ ಬಳಲುವವರ ಸಂಖ್ಯೆ 44 ಕೋಟಿಗೆ ಏರಿಕೆಯಾಗಲಿದೆ ಎಂದು ತಿಳಿಸಿದೆ. ಜನರ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿರುವುದು, ಅಡುಗೆ ಎಣ್ಣೆ, ಕೊಬ್ಬು, ಸಕ್ಕರೆ ಬಳಸಿದ ಆಹಾರಗಳ ಸೇವನೆ ಹೆಚ್ಚಿರುವುದು, ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಗಳಂತಹ ಜಂಕ್ ಫುಡ್ ಸೇವನೆ, ಆಹಾರದಲ್ಲಿ ವೈವಿಧ್ಯ, ಸೂಕ್ಷ್ಮ ಪೋಷಕಾಂಶಗಳ ಕೊರತೆ ಇರುವ ಕಾರಣಕ್ಕೆ ಭಾರತದಲ್ಲಿ ಬೊಜ್ಜಿನ ಸಮಸ್ಯೆ ಗಣನೀಯವಾಗಿ ಹೆಚ್ಚಳವಾಗಿದೆ; ಮಕ್ಕಳಲ್ಲಿಯೂ ಸ್ಥೂಲಕಾಯದ ಏರಿಕೆ ಪ್ರಮಾಣ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ವಿಪರೀತ ಹೆಚ್ಚುತ್ತಿದೆ ಎಂದು ವಿಶ್ವ ಸ್ಥೂಲಕಾಯ ಒಕ್ಕೂಟ ಹೇಳಿದೆ.