ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ರಾಶಿ ರಾಶಿ ನೋಟುಗಳು ಸಿಕ್ಕಿರುವ ಪ್ರಕರಣವು ಮಹತ್ವದ ತಿರುವೊಂದು ಪಡೆದಿದೆ. ನ್ಯಾ.ಯಶವಂತ್ ವರ್ಮಾ ಅವರ ಮನೆಯಲ್ಲಿ ನೋಟುಗಳ ರಾಶಿ ಇರುವ ವೀಡಿಯೋವನ್ನು ಸುಪ್ರೀಂ ಕೋರ್ಟೇ ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್ ವೆಬ್ ಸೈಟ್ ನಲ್ಲಿ ವೀಡಿಯೋಗಳು ಹಾಗೂ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ನ್ಯಾ.ವರ್ಮಾ ಮನೆಯಲ್ಲಿ ಕಂತೆ ಕಂತೆ ನೋಟುಗಳು ಸಿಕ್ಕಿರುವುದು ನಿಜ ಎಂದು ತಿಳಿದುಬಂದಿದೆ.
ನ್ಯಾ. ಯಶವಂತ್ ವರ್ಮಾ ಅವರ ಮನೆಯಲ್ಲಿ ನೋಟುಗಳು ಸಿಕ್ಕಿರುವ ಕುರಿತಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್ ಗೆ 25 ಪುಟಗಳ ವಿಸ್ತೃತ ವರದಿ ಸಲ್ಲಿಸಿದ್ದಾರೆ. ವರದಿಯ ಜತೆಗೆ ವೀಡಿಯೋಗಳು ಹಾಗೂ ಫೋಟೋಗಳನ್ನು ಕೂಡ ಸಲ್ಲಿಕೆ ಮಾಡಿದ್ದು, ಇವುಗಳನ್ನು ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೋಗಳು ಹಾಗೂ ಫೋಟೋಗಳು ಈಗ ವೈರಲ್ ಆಗಿವೆ.

ಆರೋಪ ಅಲ್ಲಗಳೆದ ನ್ಯಾಯಮೂರ್ತಿ
ನನ್ನ ವಿರುದ್ಧ ಹೊರಿಸಲಾದ ಆಧಾರರಹಿತ ಆರೋಪಗಳು ಮತ್ತು ಪತ್ತೆಯಾದ ನಗದು ನನಗೆ ಸೇರಿದ್ದು ಎಂಬುದು ಕೇವಲ ಊಹಾಪೋಹ ಅಷ್ಟೇ ಎಂದು ನ್ಯಾಯಮೂರ್ತಿ ವರ್ಮಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ಈ ಘಟನೆಯಿಂದ ನನ್ನ ಖ್ಯಾತಿಗೆ ಧಕ್ಕೆ ತಂದಿದೆ. ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಯಾವುದೇ ಮಾರ್ಗಗಳು ಉಳಿದಿಲ್ಲ ಎಂದು ಹೇಳಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಯಾಗಿರುವ ನನ್ನ ಮೇಲೆ ಈ ಹಿಂದೆ ಈ ರೀತಿಯ ಯಾವುದೇ ಆರೋಪಗಳು ಇಲ್ಲ., ಹೀಗಾಗಿ ನನ್ನ ಸಮಗ್ರತೆಯ ಮೇಲೆ ಯಾವುದೇ ಸಂದೇಹವಿಲ್ಲ ಎಂಬುದನ್ನು ಪರಿಗಣಿಸಲು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನ್ಯಾಯಮೂರ್ತಿಯಾಗಿ ನನ್ನ ಕಾರ್ಯನಿರ್ವಹಣೆಯ ಬಗ್ಗೆ ಮತ್ತು ನನ್ನ ನ್ಯಾಯಾಂಗ ಕಾರ್ಯನಿರ್ವಹಣೆಯ ಸಮಗ್ರತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ವಿಚಾರಣೆ ನಡೆಸಿ ಎಂದು ಕೂಡ ತಿಳಿಸಿದ್ದಾರೆ.