ಶ್ರೀನಗರ್: ಉಗ್ರ ಚಟುವಟಿಕೆಯಲ್ಲಿ ಜೈಲು ಪಾಲಾಗಿರುವ ಆರೋಪಿಯೊಬ್ಬಾತ ಜೈಲಿನಲ್ಲಿದ್ದುಕೊಂಡೇ ಗೆಲುವು ಸಾಧಿಸಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ 5 ಸ್ಥಾನಗಳಲ್ಲಿ ಈ ಬಾರಿ ಬಿಜೆಪಿ ಎರಡು, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್) ಪಕ್ಷಗಳು ತಲಾ ಎರಡು ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಜಯ ಸಾಧಿಸಿದ್ದಾನೆ.
ಈ ಪಕ್ಷೇತರ ಅಭ್ಯರ್ಥಿಯೇ ಶೇಖ್ ಅಬ್ದುಲ್ ರಷೀದ್. ಈತ ಜೈಲಿನಲ್ಲಿದ್ದುಕೊಂಡೇ ಗೆಲುವು ಸಾಧಿಸಿದ್ದಾನೆ. ಅದರಲ್ಲಿಯೂ ಈ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಅವರನ್ನೇ ಸೋಲಿಸಿದ್ದಾನೆ. ಬಾರಾಮುಲ್ಲಾ ಕ್ಷೇತ್ರದಲ್ಲಿ ಒಮರ್ ವಿರುದ್ಧ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಿಸಿದ್ದಾನೆ.
ಎಂಜಿನಿಯರ್ ರಷೀದ್ ಎಂದು ಹೆಸರಾಗಿರುವ ಶೇಖ್ ಅಬ್ದುಲ್ ರಷೀದ್ ಕಳೆದ ಐದು ವರ್ಷದಿಂದಲೂ ತಿಹಾರ್ ಜೈಲಿನಲ್ಲಿದ್ದಾನೆ. ಭಯೋತ್ಪಾದನೆಗೆ ಫಂಡಿಂಗ್ ವ್ಯವಸ್ಥೆ ಮಾಡಿರುವ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಜೈಲಿನಲ್ಲಿದ್ದರೂ ಬಾರಾಮುಲ್ಲಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯ ಸಾಧಿಸಿದ್ದಾನೆ. ರಷೀದ್ ಮಗ ಅಬ್ರಾರ್ ಪ್ರಚಾರ ಕಾರ್ಯ ನಡೆಸಿ, ತಂದೆಯನ್ನು ಗೆಲ್ಲಿಸಿದ್ದಾನೆ.