ಬೆಂಗಳೂರು: ಎಣ್ಣೆ ಅಂಗಡಿಯಲ್ಲಿ ಆರಂಭವಾದ ಸುಖಾಸುಮ್ಮನೆ ಕಿರಿಕ್ ಭೀಕರ ಮಾರಾಮಾರಿಯಾಗಿ ಅಂತ್ಯಗೊಂಡ ಘಟನೆ ನಗರದ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಂಗಲ್ ಪಾಳ್ಯದ ಅನ್ವಿಕ ಬಾರ್‌ನಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿ ಯುವಕರು ಅತಿರೇಕದ ವರ್ತನೆ ತೋರಿದ ಹಿನ್ನೆಲೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಕೌಂಟರ್ ಬಳಿ ನಿಂತಿದ್ದ ಯುವಕನೊಬ್ಬನಿಂದ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಮಾತಿನ ಚಕಮಕಿ ಹಲ್ಲೆಗೆ ತಿರುಗಿದ್ದು, ಮೊದಲಿಗೆ ಒಬ್ಬ ಯುವಕನ ಮೇಲೆ ಹಲ್ಲೆ ನಡೆದಿದೆ. ನಂತರ ಹಲ್ಲೆಗೊಳಗಾದ ಯುವಕನ ಸ್ನೇಹಿತರು ಸ್ಥಳಕ್ಕೆ ಆಗಮಿಸಿ ಪ್ರತಿಹಲ್ಲೆ ನಡೆಸಿದ್ದು, ಕೆಲಕಾಲ ಬಾರ್ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಘಟನೆ ವೇಳೆ ಅಲ್ಲಿದ್ದ ಇತರ ಗ್ರಾಹಕರು ಆತಂಕಕ್ಕೀಡಾದರು.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕೈಗಾ 5-6 ನೇ ಘಟಕದ ಪ್ರಥಮ ಕಾಂಕ್ರೀಟೀಕರಣಕ್ಕೆ ಚಾಲನೆ



















