ಕೊಪ್ಪಳ: ಕಿರುಕುಳದಿಂದಾಗಿ ಇಲ್ಲಿನ ಜಿಲ್ಲಾಸ್ಪತ್ರೆ ಹತ್ತಿರ ನರ್ಸಿಂಗ್ ಆಫೀಸರ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ನಿದ್ರೆ ಮಾತ್ರೆ ಸೇವಿಸಿ ನರ್ಸಿಂಗ್ ಆಫೀಸರ್ ಶಶಿ ಎನ್ನುವವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಹೋದ್ಯೋಗಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಶಶಿ ಅವರನ್ನು ಸಹೋದ್ಯೋಗಿಗಳು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ನರ್ಸಿಂಗ್ ಆಫೀಸರ್ ಶಶಿ ಅವರು ಇತ್ತೀಚೆಗೆ ಇತ್ತೀಚಿಗೆ ನಡೆದಿದ್ದ ನೌಕರರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಸಹೋದ್ಯೋಗಿಗಳು ಶಶಿ ಅವರ ಮನವೊಲಿಸಿ ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಿದ್ದರು. ಚುನಾವಣೆ ವಿಚಾರದಲ್ಲಿ ಕೆಲವರು ಕಿರುಕುಳ ನೀಡುತ್ತಿದ್ದಾರೆಂದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಬೆಳಗಾವಿಯ ತಹಸೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ಘಟನೆಗಳು ಮತ್ತೆ ಮರುಕಳಿಸುತ್ತಿರುವುದರಿಂದ ಆತಂಕ ಮನೆ ಮಾಡುತ್ತಿದೆ.