ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ ನರ್ಸ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೃತ್ಯದ ಸಿಸಿಟಿವಿ ವಿಡಿಯೋ ಕೂಡ ಲಭ್ಯವಾಗಿದೆ. ಪಾಗಲ್ ಪ್ರೇಮಿಯನ್ನು ಪ್ರಕಾಶ್ ಜಾಧವ್ ಎಂದು ಗುರುತಿಸಲಾಗಿದೆ. ಅಲ್ಲದೇ, ಮಗಳ ಮೇಲಿನ ದಾಳಿಯಿಂದ ಮನನೊಂದ ತಂದೆ ಸಾವನ್ನಪ್ಪಿದ್ದಾರೆ.
ಪ್ರೀತಿಸುವಂತೆ ನರ್ಸ್ ಹಿಂದೆ ಬಿದ್ದಿದ್ದ ಆರೋಪಿ ಪ್ರಕಾಶ್, ಪ್ರೀತಿಸಲು ನಿರಾಕರಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆಸ್ಪತ್ರೆಯ ಕೌಂಟರ್ ಗೆ ನುಗ್ಗಿ ನರ್ಸ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಖಾಸಗಿ ಆಸ್ಪತ್ರೆ ಹತ್ತಿರದ ಕಾಲೋನಿಯಲ್ಲಿ ನೆಲೆಸಿದ್ದ ಪ್ರಕಾಶ್, ಪ್ರೀತಿಸುವಂತೆ ನರ್ಸ್ ಹಿಂದೆ ಬಿದ್ದಿದ್ದ. ಮದುವೆ ಆಗುವಂತೆ ಪ್ರತಿದಿನ ನರ್ಸ್ಗೆ ಪೀಡಿಸುತ್ತಿದ್ದ. ಅಲ್ಲದೇ, ಕೆಲವು ದಿನಗಳ ಹಿಂದೆ ತನ್ನ ಕುಟುಂಬದೊಂದಿಗೆ ನರ್ಸ್ ಮನೆಗೆ ಕೂಡ ಹೋಗಿ ಮದುವೆ ಪ್ರಸ್ತಾಪ ಮಾಡಿದ್ದ ಎನ್ನಲಾಗಿದೆ. ಆಗ ಯುವತಿಯ ಕುಟುಂಬಸ್ಥರು ನಿರಾಕರಿಸಿದ್ದಾರೆ. ಆನಂತರವೂ ನರ್ಸ್ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಪ್ರೀತಿಸಲು ಒಪ್ಪದಿದ್ದಾಗ ಆಸ್ಪತ್ರೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಮಗಳ ಮೇಲಿನ ಹಲ್ಲೆ ವಿಚಾರದಿಂದ ನೊಂದಿದ್ದ ನರ್ಸ್ ತಂದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆರೋಪಿಯಿಂದ ಮಗಳಿಗೆ ಜೀವ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಹೆಚ್ಚು ಆತಂಕಕ್ಕೊಳಗಾಗಿದ್ದರು. ಇದೇ ಆತಂಕದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.