ಬೆಂಗಳೂರು: ಬಿಬಿಎಂಪಿಯಿಂದ ಇ ಖಾತಾ ವಿತರಣೆಗೆ ಮತ್ತಷ್ಟು ಸುಲಭ ಮಾರ್ಗಗಳನ್ನು ಕಂಡು ಹಿಡಿಯಲಾಗಿದ್ದು, ಕಂದಾಯ ಅಧಿಕಾರಿಗಳ ಲಂಚಕ್ಕೆ ಬ್ರೇಕ್ ಹಾಕಲು ಕೂಡ ಹೊಸ ಪ್ಲಾನ್ ರೂಪಿಸಲಾಗಿದೆ.
ಇ ಖಾತ ಹೆಸರಿನಲ್ಲಿ ಆಸ್ತಿ ಮಾಲೀಕರ ಬಳಿ ಕಂದಾಯ ವಿಭಾಗದ ಅಧಿಕಾರಿಗಳು ಲಕ್ಷಾಂತರ ಹಣ ವಸೂಲಿ ಮಾಡುತ್ತಿದ್ದರು. ಹೀಗಾಗಿ ಇದಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರು ಹೊಸ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ಇನ್ನು ಮುಂದೆ ಸೈಬರ್ ಸೆಂಟರ್ ನಲ್ಲೂ ಇ ಖಾತ ಸಿಗುವಂತೆ ಮಾಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ 22 ಲಕ್ಷ ಆಸ್ತಿಗಳಿವೆ. ಇವುಗಳಿಗೆ ಇ ಖಾತಾ ವಿತರಣೆ ಮಾಡುವುದು ಕಷ್ಟವಾಗುತ್ತಿದೆ. ಒಂದೆಡೆ ಪಾಲಿಕೆಗೆ ಸಿಬ್ಬಂದಿ ಕೊರತೆಯಾಗಿದ್ದರೆ, ಮತ್ತೊಂದೆಡೆ ಇಂಟರ್ನೆಟ್ ಸಮಸ್ಯೆಯಾಗುತ್ತಿದೆ. ಹೀಗಾಗಿ ಸೈಬರ್ ಸೆಂಟರ್ ನಲ್ಲೂ ಇ ಖಾತಾ ಸಿಗುವಂತೆ ಮಾಡಲಾಗುತ್ತಿದೆ.
ಕೇವಲ 15 ರೂ.ಗೆ ಖಾತಾ ಸಿಗುವಂತೆ ಮಾಡಲಾಗುತ್ತಿದೆ. ಇ ಖಾತಾ ಅಪ್ರೂವಲ್ ಗೂ ನೂತನ ನಿಯಮ ಜಾರಿಗೆ ತರಲಾಗಿದೆ. ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಅಪ್ರೂವಲ್ ಗೆ ಅನುಮತಿ ನೀಡಲಾಗಿದೆ. ಅಂದರೆ, ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಗೆ ಬೆಂಗಳೂರಿನಲ್ಲಿ ವಿದ್ಯಾರ್ಥಿ ಉತ್ತರ ಬರೆದರೆ, ಬೇರೆ ಜಿಲ್ಲೆಗಳಲ್ಲಿ ಮೌಲ್ಯಮಾಪನ ನಡೆಯುತ್ತದೆ. ಅದೇ ರೀತಿ ಇ ಖಾತಾ ಅಪ್ರೂವಲ್ ಗೆ ಚಿಂತಿಸಲಾಗುತ್ತದೆ.
ಉದಾಹರಣೆಗೆ, ನಿಮ್ಮ ಆಸ್ತಿಗೆ ಇ ಖಾತಾ ಮಾಡಿಸಿದರೆ, ಅದೇ ಕಚೇರಿ ಅಪ್ರೂವಲ್ ಮಾಡುವುದಿಲ್ಲ. ಪಾಲಿಕೆ ವ್ಯಾಪ್ತಿಯ 225 ವಾರ್ಡ್ ಗಳ ಪೈಕಿ ಯಾವುದಾದರು ಒಂದು ಕಚೇರಿ ಅಪ್ರೂವಲ್ ನೀಡುತ್ತದೆ. ಇದರಿಂದ ಕಂದಾಯ ಅಧಿಕಾರಿಗಳ ಲಂಚಕ್ಕೆ ಬ್ರೇಕ್ ಬಿದ್ದಂತಾಗುತ್ತದೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಅಯುಕ್ತ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.