ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪ್ರೀತಿ ನಿರಾಕರಿಸಿದ ಯುವಕನನ್ನು ಜೈಲಿಗೆ ಕಳುಹಿಸುವುದಕ್ಕಾಗಿ 2 ತಿಂಗಳ ಮಗುವನ್ನೇ ಬಾವಿಗೆ ಎಸೆದಿರುವ ಭಯಾನಕ ಘಟನೆಯೊಂದು ನಡೆದಿದೆ.
ಘಟನೆಯ ಹಿಂದಿನ ಕಾರಣ ಮಾತ್ರ ಬೆಚ್ಚಿ ಬೀಳುವಂತಿದೆ. ತನ್ನ ಪ್ರೀತಿಯನ್ನು ನಿರಾಕರಿಸಿದ್ದ ಗೆಳೆಯನನ್ನು ಜೈಲಿಗೆ ಕಳುಹಿಸಲು ಈ ಕೃತ್ಯ ಎಸಗಿದ್ದಳು ಎಂಬ ಸಂಗತಿಯನ್ನು ಪೊಲೀಸರು ವಿಚಾರಣೆ ವೇಳೆ ಬಾಯಿ ಬಿಡಿಸಿದ್ದಾರೆ. ಹಸುಗೂಸನ್ನು ಬಾವಿಗೆ ಎಸೆದು ಕೊಲೆ ಮಾಡಿದ್ದ ಆರೋಪದ ಮೇರೆಗೆ ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯನ್ನು ಪೋಲಿಸರು ಬಂಧಿಸಿ ಬಾಲ ಮಂದಿರಕ್ಕೆ ಒಪ್ಪಿಸಿದ್ದಾರೆ.
ಯಾದಗಿರಿಯ ಅಂಬೇಡ್ಕರ್ ನಗರದ ನಾಗೇಶ ಹಾಗೂ ಚಿಟ್ಟೆಮ್ಮ ದಂಪತಿಯ 2 ತಿಂಗಳ ಮಗುವನ್ನೇ ಪೋಸ್ಟ್ ಆಫೀಸ್ ಹಿಂದಿರುವ ಬಾವಿಯಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಸುಗೂಸು ಬಾವಿಯಲ್ಲಿ ಬಿದ್ದಿರಬಹುದು ನೋಡಿ ಎಂದು ಬಾಲಕಿಯೇ ಮೊದಲು ಹೇಳಿದ್ದಳು. ನಂತರ ಬಾಲಕಿ ಮಗುವನ್ನು ಎತ್ತಿಕೊಂಡು ಹೋಗಿರುವುದನ್ನು ನೋಡಿದವರು ಪೋಲಿಸರಿಗೆ ದೂರವಾಣಿಯಲ್ಲಿ ಮಾಹಿತಿ ತಿಳಿಸಿದ್ದರು.
ಆರಂಭದಲ್ಲಿ ಬಾಲಕಿ ಮಗುವಿನ ಚಿಕ್ಕಪ್ಪನೇ ಕೊಲೆ ಮಾಡಿರಬಹುದು ಎಂದು ಹೇಳಿದ್ದಳು. ಆಗ ಪೊಲೀಸರು ಇಬ್ಬರನ್ನೂ ಕರೆತಂದು ವಿಚಾರಣೆ ನಡೆಸಿದಾಗ ಬಾಲಕಿ ಬಾಯಿ ಬಿಟ್ಟಿದ್ದಾಳೆ. ಅಪ್ರಾಪ್ತೆಯು ಬಾಲಕಿಯು ಮಗುವಿನ ಚಿಕ್ಕಪ್ಪನನ್ನು ಪ್ರೀತಿಸುತ್ತಿದ್ದಳು. ಆದರೆ, ಸಂಬಂಧದಲ್ಲಿ ತಂಗಿಯಾಗಿದ್ದ ಆರೋಪಿಯನ್ನು ಪ್ರೀತಿಸಲು ಯುವಕ ನಿರಾಕರಿಸಿದ್ದಾನೆ. ಹೀಗಾಗಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.