ಹಾಸನ: ಅಪ್ರಾಪ್ತ ಬುದ್ದಿಮಾಂಧ್ಯೆ ಮೇಲೆ ಎರಡು ಮಕ್ಕಳಿದ್ದ ಕಾಮುಕ ತಂದೆಯೊಬ್ಬ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಪಕ್ಕದ ಮನೆಯ ನಿವಾಸಿಯಿಂದಲೇ ಈ ಹೀನ ಕೃತ್ಯ ನಡೆದಿದೆ ಎರಡು ಮಕ್ಕಳ ಪಾಪಿ ತಂದೆ ಅತ್ಯಾಚಾರ ನಡೆಸಿದ್ದಾನೆ. ಮಂಗಳವಾರ ಬಾಲಕಿಯ ಮನೆಯವರು ಸಂಬಂಧಿಕರೊಬ್ಬರ ಬೀಗರ ಔತಣ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಬಾಲಕಿ ಇದ್ದಳು. ಈ ವೇಳೆ ಮನೆಗೆ ನುಗ್ಗಿದ ಪಾಪಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.
ಕುಟುಂಬಸ್ಥರೆಲ್ಲ ಮನೆಗೆ ಬಂದಾಗ ಬಾಲಕಿ ಅಳಲು ಆರಂಭಿಸಿದ್ದಾಳೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಾಗಿ ಬಲೆ ಬೀಸಿದ್ದಾರೆ.