ಬೆಂಗಳೂರು : ಐಪಿಎಲ್ ಪಂದ್ಯಕ್ಕೆ ಕೇವಲ ಮೂರೇ ದಿನ ಬಾಕಿಯಿರುವ ಹಿನ್ನೆಲೆ ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗಣಹೋಮ ನೆರವೇರಿಸಲಾಯ್ತು.

ಕಳೆದ ವರ್ಷ ಆರ್ಸಿಬಿ ವಿಜಯೋತ್ಸವದ ವೇಳೆ ನಡೆದ 11 ಅಭಿಮಾನಿಗಳ ದಾರುಣ ಸಾವು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ಮುಂದೆ ಇಂತಹ ಯಾವುದೇ ಅವಘಡ ಆಗದೇ ಇರಲಿ ಎಂದು ಮೃತ್ಯುಂಜಯ ಹೋಮ, ಗಣಪತಿ ಹೋಮ, ಲಕ್ಷ್ಮಿ ಹೋಮವನ್ನು ಇಂದು ಕೆಎಸ್ಸಿಎ ಆಯೋಜಿಸಿತ್ತು.
ಪೂಜೆಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಗೃಹ ಸಚಿವ ಜಿ.ಪರಮೇಶ್ವರ್, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿ ಹಲವರು ಭಾಗವಹಿಸಿದ್ದು, ಕ್ರೀಡಾಂಗಣದ ಗೇಟ್ಗಳಿಗೆ ಬೂದ ಗುಂಬಳಕಾಯಿ ಒಡೆದು ದೃಷ್ಟಿ ತೆಗೆಯಲಾಯ್ತು.
ಅಷ್ಟೇ ಅಲ್ಲದೇ ಕಳೆದ ವರ್ಷ ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳ ನೆನಪಿಗಾಗಿ ಕೆಎಸ್ಸಿಎ ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲೇ ಸ್ಮಾರಕ ನಿರ್ಮಾಣ ಮಾಡಿದೆ. ʻಮೆಮೋರಿ ಆಫ್ ಫ್ಯಾನ್ಸ್ ಜೂನ್-4 2025ʼ ಎಂದು ಸ್ಮಾರಕದ ಮೇಲೆ ಬರೆಯಲಾಗಿದೆ.

ಇನ್ನು 11 ಜನರ ನೆನಪಿಗಾಗಿ ಐಪಿಎಲ್, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 11 ಸೀಟುಗಳನ್ನ ಖಾಲಿ ಬಿಡೋದಾಗಿ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ. ಆ ಸೀಟ್ನ ಟಿಕೆಟ್ಗಳನ್ನ ಯಾವತ್ತೂ ಮಾರಾಟ ಮಾಡಲ್ಲ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕ ಸರ್ಕಾರದ KSRLPS ಸಂಸ್ಥೆಯಲ್ಲಿ ನೇಮಕಾತಿ.. ಕೂಡಲೇ ಅರ್ಜಿ ಸಲ್ಲಿಸಿ!


















