ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆದಿದ್ದ ಉಪ ಚನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿದ್ದು, ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಚುನಾವಣೆ ಸಂದರ್ಭದಲ್ಲಿ ಸರ್ಕಾರವನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದರೂ ಮತದಾರರು ಮಾತ್ರ ಕಾಂಗ್ರೆಸ್ ಗೆ ಜೈ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಚರ್ಚಿಸಲು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಿರಿಯ ನಾಯಕರ ಸಭೆ ಕರೆದಿದ್ದಾರೆ.
ಈ ಸಭೆಯು ಮಂಗಳವಾರ ನಡೆಯಲಿದೆ. ಬೆಳಗಾವಿ ಅಧಿವೇಶನ ಹಾಗೂ ಸರ್ಕಾರದ ವಿರುದ್ಧ ಮತ್ತೊಂದು ಹಂತದ ಹೋರಾಟ ರೂಪಿಸುವ ನಿಟ್ಟಿನಲ್ಲಿ ಈ ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ. ಶಿಗ್ಗಾವಿಯಲ್ಲಿ ಬಿಜೆಪಿ ತನ್ನ ಕಪಿಮುಷ್ಠಿಯಲ್ಲಿರುವ ಕ್ಷೇತ್ರವನ್ನು ಕಳೆದುಕೊಂಡಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಭಂಗ ಅನುಭವಿಸಿದೆ. ಹೀಗಾಗಿ ಬಿಜೆಪಿಯ ಆತ್ಮವಿಶ್ವಾಸ ಕುಸಿದಿದ್ದು, ಬಿಜೆಪಿ ನಾಯಕರು ಈ ಸಭೆಯ ಮೂಲಕ ಆತ್ಮಾವಲೋಕನ ನಡೆಸಲಿದ್ದಾರೆ.
ಅಲ್ಲದೇ, ಡಿಸೆಂಬರ್ 7 ರಂದು ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಪಕ್ಷದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಅದರಿಂದ ಬೀರುತ್ತಿರುವ ಪರಿಣಾಮಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಕಮಿಟಿ ಸಭೆಯ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.