ನವದೆಹಲಿ: ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಸಂಸತ್ ಭವನದ ಕಡೆಗೆ ಓಡಿರುವ ಘಟನೆ ನಡೆದಿದೆ.
ಇದನ್ನು ಗಮನಿಸಿದ ಅಲ್ಲಿದ್ದ ಸ್ಥಳೀಯರು ಹಾಗೂ ರೈಲ್ವೆ ಪೊಲೀಸರು ಸೇರಿ ಬೆಂಕಿ ನಂದಿಸಿದ್ದಾರೆ. ಅಷ್ಟೊತ್ತಿಗಾಗಲೇ ಆ ವ್ಯಕ್ತಿಯ ಶೇ. ಶೇ. 95ರಷ್ಟು ಸುಟ್ಟಿತ್ತು ಎನ್ನಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆ ವ್ಯಕ್ತಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಥಳದಲ್ಲಿ ಭಾಗಶಃ ಸುಟ್ಟ ಎರಡು ಪುಟಗಳ ನೋಟ್ ಪತ್ತೆಯಾಗಿದೆ. ಸುಟ್ಟುಕೊಂಡ ವ್ಯಕ್ತಿಯನ್ನು ಉತ್ತರ ಪ್ರದೇಶದ ಬಾಗಪತ್ ನ ಜಿತೇಂದ್ರ ಎಂದು ಗುರುತಿಸಲಾಗಿದೆ. ರೈಲ್ವೆ ಭವನದ ಬಳಿಯ ಉದ್ಯಾನವನದಲ್ಲಿ ಬೆಂಕಿ ಹಚ್ಚಿಕೊಂಡು ನಂತರ ಸಂಸತ್ ಭವನದ ಕಡೆಗೆ ಓಡಿ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿತೇಂದ್ರ ಕುಟುಂಬ ಹಾಗೂ ಮತ್ತೊಂದು ಕುಟುಂಬದ ಮಧ್ಯೆ ಜಗಳವಾಗಿತ್ತು. ಹೀಗಾಗಿ ಎರಡೂ ಕುಟುಂಬಸ್ಥರು ಜೈಲು ಪಾಲಾಗಿದ್ದರು. ಇದರಿಂದ ಬೇಸತ್ತ ಜಿತೇಂದ್ರ ರೈಲು ಹತ್ತಿ ದೆಹಲಿಗೆ ಬಂದು ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.