ಸೀತಾಪುರ: ತಾಯಿ, ಪತ್ನಿ ಹಾಗೂ ಮೂವರು ಅಪ್ರಾಪ್ತ ಮಕ್ಕಳನ್ನು ಕೊಲೆ ಮಾಡಿ ಕೊನೆಗೆ ಗುಂಡು ಹಾರಿಸಿಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ (Uttar Pradesh) ಸೀತಾಪುರದಲ್ಲಿ ನಡೆದಿದ್ದು, ಉದ್ಯಮಿಯೊಬ್ಬ ಈ ಕೃತ್ಯ ಎಸಗಿದ್ದಾನೆ. 45 ವರ್ಷದ ಆರೋಪಿ ಅನುರಾಗ್ ಸಿಂಗ್ ಈ ಕೃತ್ಯ ಎಸಗಿದ್ದಾನೆ. ಈತ ಕುಡಿತದ ದಾಸನಾಗಿದ್ದ. ನಶೆಯಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಅನುರಾಗ್ ಸಿಂಗ್ ಅವರ ತಾಯಿ ಸಾವಿತ್ರಿ ದೇವಿ (60), ಅವರ ಪತ್ನಿ ಪ್ರಿಯಾಂಕಾ (40), ಮತ್ತು ಅವರ ಮೂವರು ಪುತ್ರಿಯರಾದ ಅಶ್ವಿನಿ (12), ಅಶ್ವಿ (10), ಮತ್ತು ಮಗ ಅದ್ವೈತ್ (6) ಕೊಲೆಯಾದ ದುರ್ದೈವಿಗಳು ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ತೆರಳಿದ್ದು, ಅಷ್ಟರಲ್ಲಿ ಮನೆಯವರೆಲ್ಲ ಶವದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೆಲವರನ್ನು ಚಾಕುವಿನಿಂದ ಕೊಲೆ ಮಾಡಿದ್ದರೆ, ಇನ್ನೂ ಕೆಲವರಿಗೆ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ.
ಆದರೆ, ಸ್ಥಳೀಯರ ಮಾಹಿತಿಯಂತೆ, ತಾಯಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಮಕ್ಕಳನ್ನೂ ಸುತ್ತಿಗೆಯಿಂದ ಹೊಡೆದು, ನಂತರ ಮನೆಯ ಎರಡನೇ ಮಹಡಿಯ ಬಾಲ್ಕನಿಯಿಂದ ನೆಲ ಮಹಡಿಗೆ ಎಸೆದಿದ್ದಾನೆ ಎಂದು ತಿಳಿದು ಬಂದಿದೆ. ಆತ ಕುಡಿದು ಬಂದು ಜಗಳವಾಡುತ್ತಿದ್ದ. ಕೊಲೆ ಮಾಡಿರುವ ವ್ಯಕ್ತಿ ಕೃಷಿ ಮಾಡುತ್ತಿದ್ದ. ಪತ್ನಿ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳು ಲಕ್ನೋದ ಪ್ರಸಿದ್ಧ ಶಾಲೆಯಲ್ಲಿ ಓದುತ್ತಿದ್ದರು ಎನ್ನಲಾಗಿದೆ.