ಮೈಸೂರು: ತನ್ನ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ವ್ಯಕ್ತಿ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ. ಈ ಘಟನೆ ಎಚ್.ಡಿ. ಕೋಟೆ ತಾಲೂಕಿನ ಕಣಿಯನ ಹುಂಡಿ ಗ್ರಾಮದಲ್ಲಿ ನಡೆದಿದೆ. ತೇಜಸ್ವಿನಿ (26) ಕೊಲೆಯಾಗಿರುವ ಪತ್ನಿ. ದೇವರಾಜ್ ಕೊಲೆ ಮಾಡಿರುವ ಪತಿ ಎನ್ನಲಾಗಿದೆ.
ಕೊಲೆಯ ನಂತರ ದೇವರಾಜ್ ನೇರವಾಗಿ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸದ್ಯ ಆರೋಪಿ ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೈಸೂರು ತಾಲೂಕು ಕುಟ್ಟಾಡಿ ಗ್ರಾಮದ ತೇಜಸ್ವಿನಿ 8 ವರ್ಷಗಳ ಹಿಂದೆ ಕಣಿಯನಹುಂಡಿ ಗ್ರಾಮದ ನಿವಾಸಿ ದೇವರಾಜನೊಂದಿಗೆ ಮುದುವೆಯಾಗಿದ್ದರು. ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದ ದಂಪತಿ, ಬೇಸಾಯ ಮಾಡಿಕೊಂಡಿದ್ದರು. ಈ ದಂಪತಿಗೆ 5 ವರ್ಷದ ಗಂಡು ಮಗು ಮತ್ತು ಮೂರು ವರ್ಷದ ಹೆಣ್ಣು ಮಗುವಿದೆ. ಆದರೆ, ಇತ್ತೀಚೆಗೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಈ ಜಗಳ ವಿಕೋಪಕ್ಕೆ ತೆರಳಿದ್ದು, ಕೆಲವು ಬಾರಿ ಪೊಲೀಸರು ಹಾಗೂ ಗ್ರಾಮಸ್ಥರ ಸೇರಿ ರಾಜೀ ಮಾಡಿದ್ದರು.
ಆದರೆ, ಬುಧವಾರ ದಂಪತಿ ಮಧ್ಯೆ ಗಲಾಟೆ ನಡೆದಿದೆ. ಸಿಟ್ಟಿನಲ್ಲಿದ್ದ ಪತಿ, ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.