ಕೊಡಗು: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ವಿರಾಜಪೇಟೆ(Virajpet)ತಾಲ್ಲೂಕಿನ ಬೆಟೋಳಿ ಎಂಬಲ್ಲಿ ಈ ಘಟನೆ ನಡೆದಿದೆ. ಶಿಲ್ಪ (34) ಕೊಲೆಯಾಗಿರುವ ದುರ್ದೈವಿ. ಬೋಪಣ್ಣ ಕೊಲೆ ಮಾಡಿರುವ ಆರೋಪಿ. ಇವರಿಬ್ಬರು ಕಳೆದ 18 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಬೇರೊಬ್ಬರೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿ, ಪ್ರಶ್ನಿಸಿದ್ದಾನೆ. ಇದರಿಂದಾಗಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಇದು ವಿಕೋಪಕ್ಕೆ ತೆರಳಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕೋವಿಯಿಂದ ಪತ್ನಿಯ ಎದೆಗೆ ಗುಂಡು ಹಾರಿಸಿ, ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.