ಬೆಂಗಳೂರು: ಗಂಡನನ್ನು ಬಿಟ್ಟ ಮಹಿಳೆಯೊಬ್ಬರಿಗೆ ಬಾಳು ಕೊಡುತ್ತೇನೆಂದು ಕಾರು ಚಾಲಕನೋರ್ವ ವಂಚಿಸಿರುವ (Cheating) ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯಲ್ಲಿ (Bengaluru) ಈ ಘಟನೆ ನಡೆದಿದೆ. ಕ್ಯಾಬ್ ಚಾಲಕ ಪ್ರಜ್ವಲ್ ಎಂಬ ವ್ಯಕ್ತಿಯೇ ಮಹಿಳೆಗೆ ಮೋಸ ಮಾಡಿದ್ದಾರೆ. ವಂಚನೆಗೊಳಗಾಗಿರುವ ಹಿನ್ನೆಲೆಯಲ್ಲಿ ಮಹಿಳೆಯು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೊಂದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾಕುತ್ತಿದ್ದಳು. ಇದನ್ನು ಗಮನಿಸಿದ ಚಾಲಕ ಪ್ರಜ್ವಲ್ ಆ ರೀಲ್ಸ್ಗಳಿಗೆ ಲೈಕ್, ಕಮೆಂಟ್ ಮಾಡುತ್ತಿದ್ದ. ಮಹಿಳೆ ಕೂಡ ಆ ಕಮೆಂಟ್ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಳು. ಹೀಗಾಗಿ ಇಬ್ಬರ ಮಧ್ಯೆ ಪರಿಚಯ ಬೆಳೆದು ಇಬ್ಬರೂ ಹತ್ತಿರವಾಗಿದ್ದಾರೆ. ಮೆಸೇಜ್ ಮಾಡ್ತಾ, ಮಾಡ್ತಾ ಪ್ರಜ್ವಲ್ ಮನೆವರೆಗೂ ಬಂದಿದ್ದ. ನಿನಗೆ ಬಾಳು ಕೊಡುತ್ತೇನೆ ಎಂದು ಒಟ್ಟಿಗೆ ವಾಸವಾಗಿದ್ದ. ಆದರೆ ಈಗ ಮೋಸ ಮಾಡಿ ಬಿಟ್ಟು ಹೋಗಿದ್ದಾನೆ. ಹೀಗಾಗಿ ಅವನೇ ಬೇಕು ಎಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
13 ವರ್ಷದ ಹಿಂದೆ ವ್ಯಕ್ತಿಯೊಬ್ಬನನ್ನು ವಿವಾಹವಾಗಿದ್ದ ಮಹಿಳೆಗೆ ಇಬ್ಬರು ಮಕ್ಕಳಿದ್ದರು. ಗಂಡ ಕುಡಿದು ಬಂದು ಪ್ರತಿದಿನ ಕಿರುಕುಳ ನೀಡುತ್ತಿದ್ದಾನೆಂದು ತವರು ಮನೆ ಸೇರಿದ್ದಳು. ಆದರೆ, ಇತ್ತೀಚೆಗೆ ತವರು ಮನೆ ತೊರೆದು ಪ್ರತ್ಯೇಕವಾಗಿ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಳು. ಸ್ನೇಹಿತರ ಜೊತೆಗೆ ರೂಮ್ ನಲ್ಲಿ ವಾಸ್ತವ್ಯ ಹೂಡಿದ್ದಳು. ಬೇಜಾರು ಕಳಿಯಲು ಆಗಾಗ ರೀಲ್ಸ್ ಮಾಡುತ್ತಿದ್ದಳು.
ಆಕೆಯ ರೀಲ್ಸ್ ಗೆ ಪ್ರಜ್ವಲ್ ಮೆಸೆಜ್ ಹಾಕುತ್ತಿದ್ದ. ನಂತರ ಫೋನ್ ನಂಬರ್ ಎಕ್ಸ್ ಚೇಂಜ್ ಆಗಿ ಫೋನ್ ಮಾಡಲು ಆರಂಭಿಸಿದ್ದರು. 13 ಹಾಗೂ 10 ವರ್ಷದ ಮಕ್ಕಳಿದ್ದಾರೆ ಎಂದು ಮಹಿಳೆ ಹೇಳಿಕೊಂಡಿದ್ದಳು. ಹೀಗಿದ್ದರೂ ಮದುವೆ ಆಗುವುದಾಗಿ ಪ್ರಜ್ವಲ್ ನಂಬಿಸಿದ್ದಾನೆ. ಮಹಿಳೆ ಇದ್ದ ಮನೆಯಲ್ಲಿ ತಾನೂ ಇರಲು ಆರಂಭಿಸಿದ್ದಾನೆ. ಆದರೆ, ಇತ್ತೀಚೆಗೆ ಮಹಿಳೆಗೆ ಕೈ ಕೊಟ್ಟಿದ್ದಾನೆ. ಈ ಕುರಿತು ಮಹಿಳೆ ದೂರು ಸಲ್ಲಿಸಿದ್ದಾಳೆ.