ವ್ಯಕ್ತಿಯೊಬ್ಬ ಮ್ಯಾಜಿಕ್ ಮಶ್ರೂಮ್ ತಿಂದು ಭ್ರಮೆಯಲ್ಲಿ ತನ್ನ ಖಾಸಗಿ ಅಂಗ ಕತ್ತರಿಸಿಕೊಂಡಿರುವ ಘಟನೆ ನಡೆದಿದೆ.
ಮ್ಯಾಜಿಕ್ ಮಶ್ರೂಮ್ ಎಂದು ಕರೆಯುವ ಸೈಲೋಸಿಬಿನ್ ಅಣಬೆ ತಿಂದ ಪರಿಣಾಮ ಭ್ರಮೆ ಉಂಟಾಗಿ ಆಸ್ಟ್ರೀಯಾದ ವ್ಯಕ್ತಿ ಕೊಡಲಿಯಿಂದ ತನ್ನ ಗುಪ್ತಾಂಗ ಕತ್ತರಿಸಿಕೊಂಡಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಈ ವ್ಯಕ್ತಿ ಅತಿಯಾದ ಮದ್ಯಪಾನ ಹಾಗೂ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನಾಲ್ಕರಿಂದ ಐದು ಒಣಗಿದ ಸೈಲೋಸಿಬಿನ್ ಅಣಬೆಗಳನ್ನು ತಿಂದಿದ್ದಾನೆ. ಈ ಅಣಬೆಯನ್ನು ತಿಂದ ನಂತರ ಆತನಿಗೆ ತಲೆ ತಿರುಗಲು ಆರಂಭಿಸಿದೆ. ಆಗ ಮಾನಸಿಕ ಸ್ಥಿರತೆ ಕಳೆದುಕೊಂಡು ತನ್ನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾನೆ. ಇದರಿಂದ ವಿಪರೀತ ರಕ್ತಸ್ರಾವವಾಗಿದ್ದು, ಬಟ್ಟೆ ಕಟ್ಟುವ ಮೂಲಕ ರಕ್ತಸ್ರಾವವನ್ನು ನಿಲ್ಲಿಸಲು ಯತ್ನಿಸಿದ್ದಾನೆ.
ಈತ ರಕ್ತದ ಮಡುವಿನಲ್ಲಿ ಮುಳುಗಿರುವುದನ್ನು ಕಂಡ ದಾರಿಹೋಕರೊಬ್ಬರು ಆಂಬ್ಯಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಣ್ಣು ಮತ್ತು ಕೋಲ್ಡ್ ನೀರು ಗುಪ್ತಾಂಗಕ್ಕೆ ತಗುಲಿದ ಪರಿಣಾಮ ಶಸ್ತ್ರ ಚಿಕಿತ್ಸೆ ಮಾಡಲು ಕಷ್ಟಕರವಾಗಿದ್ದರೂ ಕೂಡಾ ವೈದ್ಯರು ತುಂಡರಿಸಿದ ಜನನಾಂಗವನ್ನು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನಂತರ ವ್ಯಕ್ತಿಯನ್ನು ಮನೋವೈದ್ಯಕೀಯ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮ್ಯಾಜಿಕ್ ಮಶ್ರೂಮ್ ಅಣಬೆಯಾಗಿದ್ದು, ಸೈಲೋಸಿಬಿನ್ ಎಂಬ ಸಂಯುಕ್ತ ಹೊಂದಿರುತ್ತದೆ. ಅಣಬೆಯನ್ನು ಸೇವಿಸಿದರೆ ಇದು ಮೆದುಳಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರಿ ಮನುಷ್ಯನನ್ನು ಭ್ರಮೆಯ ಸ್ಥಿತಿಗೆ ತಳ್ಳುತ್ತದೆ. ಮತ್ತು ವ್ಯಕ್ತಿಯು ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುವಂತೆ ಮಾಡುತ್ತದೆ. ಖಿನ್ನತೆ ಮತ್ತು ಇತರೆ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿರುವ ಈ ಮ್ಯಾಜಿಕ್ ಮಶ್ರೂಮ್ ನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದು ಎನ್ನಲಾಗಿದೆ.