ಕನ್ನಡಗರನ್ನು ಪಹಲ್ಗಾಮ್ ಘಟನೆಗೆ ಹೋಲಿಸಿದ್ದಾರೆಂಬ ಕಾರಣಕ್ಕೆ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡಿಗರು ಉಗ್ರ ರೂಪ ತಾಳಿದ್ದಾರೆ. ಈ ಹಿನ್ನೆಲೆಯಲ್ಲಿ ಸೋನು ವಿರುದ್ಧ ಎಫ್ ಐಆರ್ ದಾಖಲಾಗಿದೆ. ಈಗ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್, ಹಿಂದಿ ಹಾಡುಗಳನ್ನು ಹಾಡುತ್ತಿದ್ದಾಗ ವಿದ್ಯಾರ್ಥಿಗಳು ಕನ್ನಡ ಹಾಡುವಂತೆ ಒತ್ತಾಯಿಸಿದ್ದಾರೆ. ಇದರಿಂದ ಸಿಟ್ಟಾದ ಸೋನು ನಿಗಮ್, ‘ಕನ್ನಡ..ಕನ್ನಡ ಅಂತೀರಿ.. ಇಂಥಹುದರಿಂದಲೇ ಪಹಲ್ಗಾಮ್ ದಾಳಿ ಆಗಿದ್ದು’ ಎಂದು ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಕೆ ಮಾಡಿದ್ದರು.
ಸೋನು ಹೇಳಿಕೆ ವೈರಲ್ ಆಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದು, ಸೋನು ನಿಗಮ್ ವಿರುದ್ಧ ದೂರುಗಳು ದಾಖಲಾಗಿವೆ. ಸೋನು ನಿಗಮ್ ನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂಬ ಒತ್ತಾಯ ಕೂಡ ಕೇಳಿ ಬಂದಿವೆ. ಅಲ್ಲದೇ, ಎಫ್ ಐಆರ್ ಕೂಡ ದಾಖಲಾಗಿದ್ದು, ಪೊಲೀಸರು ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.