ಬೆಂಗಳೂರು: ವ್ಯಕ್ತಿಯೊಬ್ಬಾತ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿರುವ ಘಟನೆ ನಡೆದಿದೆ.
ಒಡೆಯರ್ ಎಕ್ಸ್ ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ(Bengaluru) ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯ ಉದ್ಯೋಗಿ ಸುಶಾಂತ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎನ್ನಲಾಗಿದೆ.
ಈ ವ್ಯಕ್ತಿ ಮೂಲತಃ ಪಶ್ಚಿಮ ಬಂಗಾಳ ಮೂಲದವನು ಎನ್ನಲಾಗಿದೆ. ಕೆಲಸದ ಹಿನ್ನೆಲೆಯಲ್ಲಿ ಈ ವ್ಯಕ್ತಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸಂಜೆ ಮರಳಿ ಹೋಗುವಾಗ ಒಡೆಯರ್ ಎಕ್ಸ್ಪ್ರೆಸ್ ರೈಲು ಹತ್ತಿದ್ದಾನೆ. ಆದರೆ, ಏಕಾಏಕಿ ಹೊರಡುವ ಸಂದರ್ಭದಲ್ಲಿ ಕೆಳಗಿಳಿದು ರೈಲಿಗೆ ತಲೆಕೊಟ್ಟಿದ್ದಾನೆ. ಈ ಕುರಿತು ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.