ನವದೆಹಲಿ: ದೆಹಲಿಯ ಜೈನ ದೇವಾಲಯವೊಂದರಿಂದ ಸುಮಾರು 40 ಲಕ್ಷ ರೂ. ಮೌಲ್ಯದ ಚಿನ್ನ ಲೇಪಿತ ‘ಕಳಶ’ವನ್ನು ಕಳ್ಳನೊಬ್ಬ ಕದ್ದೊಯ್ದಿರುವ ಘಟನೆ ವರದಿಯಾಗಿದೆ. ಈಶಾನ್ಯ ದೆಹಲಿಯ ಜ್ಯೋತಿ ನಗರದಲ್ಲಿರುವ ದೇವಾಲಯದ ಶಿಖರದ ಮೇಲಿದ್ದ ಕಳಶವನ್ನು ಆರೋಪಿಯು ವಿದ್ಯುತ್ ತಂತಿಗಳ ಸಹಾಯದಿಂದ ಹತ್ತಿ ಕದ್ದಿದ್ದಾನೆ.
ಶುಕ್ರವಾರ ತಡರಾತ್ರಿ ಈ ಕಳ್ಳತನ ನಡೆದಿದ್ದು, ಈ ಸಂಪೂರ್ಣ ಕೃತ್ಯ ದೇವಾಲಯದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸ್ಥಳೀಯರು ಕರ್ವಾ ಚೌತ್ ಹಬ್ಬದ ಆಚರಣೆಯಲ್ಲಿ ನಿರತರಾಗಿದ್ದಾಗ ಈ ಘಟನೆ ನಡೆದಿದೆ. ಶನಿವಾರ ಬೆಳಿಗ್ಗೆ, ಸ್ಥಳೀಯರು ಕಳಶ ಕಾಣೆಯಾಗಿರುವುದನ್ನು ಗಮನಿಸಿ ದೇವಾಲಯದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಕಳುವಾದ ಕಳಶವು ಸುಮಾರು 25 ರಿಂದ 30 ಕಿ.ಗ್ರಾಂ. ತೂಕದ ತಾಮ್ರದಿಂದ ಮಾಡಲ್ಪಟ್ಟಿದ್ದು, ಅದರ ಮೇಲೆ ಚಿನ್ನದ ಲೇಪನವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ರಾತ್ರಿ ಸುಮಾರು 11:45ಕ್ಕೆ ವ್ಯಕ್ತಿಯೊಬ್ಬ ದೇವಾಲಯದ ಹೊರಗೆ ಅಡ್ಡಾಡುತ್ತಿದ್ದು, ನಂತರ ಮೇಲಕ್ಕೆ ಹತ್ತಿ ಕಳಶವನ್ನು ಕದ್ದೊಯ್ದಿರುವುದು ಕಂಡುಬಂದಿದೆ. ಕೆಲವೇ ದಿನಗಳ ಹಿಂದೆ ಕೆಂಪು ಕೋಟೆ ಬಳಿ ನಡೆದ ಜೈನ ಧಾರ್ಮಿಕ ಕಾರ್ಯಕ್ರಮವೊಂದರಿಂದ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ವಸ್ತುಗಳ ಕಳ್ಳತನವಾದ ಬೆನ್ನಲ್ಲೇ ಈ ಘಟನೆ ಸಂಭವಿಸಿರುವುದು ಗಮನಾರ್ಹವಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಹಲವು ತಂಡಗಳನ್ನು ರಚಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ತಾಂತ್ರಿಕ ಕಣ್ಗಾವಲು ಮೂಲಕ ಆರೋಪಿಯ ಚಲನವಲನಗಳನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.



















