ಬೆಂಗಳೂರು: ಕಾಮುಕರ ಅಟ್ಟಹಾಸ ಮಿತಿ ಮೀರುತ್ತಿದೆ. ನಗರದಲ್ಲಂತೂ ಕಾಮುಕರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಿಲಿಕಾನ್ ಸಿಟಿಯ ನ್ಯೂ ಬಿಇಎಲ್ ರಸ್ತೆಯಲ್ಲಿನ (ರಾಮಯ್ಯ ಆಸ್ಪತ್ರೆ ಮುಂಬಾಗದ 80 ಅಡಿ ರಸ್ತೆಯಲ್ಲಿನ) ಥರ್ಡ್ ವೇವ್ ಕೆಫೆಯ (Third Wave Coffee) ಮಹಿಳೆಯರ ಶೌಚಾಲಯದಲ್ಲಿ (Woman Toilet) ವಿಡಿಯೋ ಚಿತ್ರಕರಣ ಮಾಡಿಕೊಳ್ಳುವುದಕ್ಕಾಗಿ ಕಾಮುಕ ಮೊಬೈಲ್ (Mobile) ಇಟ್ಟಿದ್ದ. ಸದ್ಯ ಆರೋಪಿಯನ್ನು ಸದಾಶಿವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಮೂಲದ 23 ವರ್ಷದ ಮನೋಜ್ ಬಂಧಿತ ಆರೋಪಿ. ಆರೋಪಿಯು ಇದೇ ಕಾಫಿ ಶಾಪ್ ನಲ್ಲಿ ಕಾಫಿ ಮೇಕರ್ ಆಗಿದ್ದ. ಈದ ಆಗಸ್ಟ್ 10ರ ಬೆಳಿಗ್ಗೆ ಮಹಿಳೆಯರ ಶೌಚಾಲಯಕ್ಕೆ ಹೋಗಿ, ಅಲ್ಲಿ ಕಸದ ಬುಟ್ಟಿಗೆ ಹೋಲ್ ಮಾಡಿ ಮೊಬೈಲ್ ನ್ನು ಫ್ಲೈಟ್ ಮೂಡ್ ಗೆ ಹಾಕಿ ವಿಡಿಯೋ ಚಿತ್ರಕರಣಕ್ಕೆ ಇರಿಸಿದ್ದಾನೆ.
ಆದರೆ, ಶೌಚಾಲಯಕ್ಕೆ ಹೋಗಿದ್ದ ಮಹಿಳೆಯೊಬ್ಬರು ಮೊಬೈಲ್ ಇರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ಮನೋಜ್ ನನ್ನು ಬಂಧಿಸಿದ್ದಾರೆ.
ಈ ವಿಷಯವಾಗಿ ಥರ್ಡ್ ವೇವ್ ಕೆಫೆ ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, ನಮ್ಮ ಬೆಂಗಳೂರಿನ ಬಿಇಎಲ್ ರಸ್ತೆಯ ಶಾಖೆಯಲ್ಲಿ ನಡೆದ ಅಹಿತಕರ ಘಟನೆಗೆ ನಾವು ವಿಷಾದಿಸುತ್ತೇವೆ. ಥರ್ಡ್ ವೇವ್ ಕಾಫಿಯಲ್ಲಿ ಅಂತಹ ಕ್ರಮಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಸಿಬ್ಬಂದಿಯನ್ನು ಕೂಡಲೇ ವಜಾಗೊಳಿಸಿದ್ದೇವೆ. ನಮ್ಮ ಗ್ರಾಹಕರ ಸುರಕ್ಷತೆ ನಮಗೆ ಬಹಳ ಮುಖ್ಯ. ಈ ಪರಿಸ್ಥಿತಿಯನ್ನು ನಾವು ತ್ವರಿತವಾಗಿ ಪರಿಹರಿಸಿದ್ದೇವೆ ಎಂದು ಬರೆದುಕೊಂಡಿದೆ.