ಹುಬ್ಬಳ್ಳಿ: ಉಪನ್ಯಾಸಕರೊಬ್ಬರು ಕ್ವಾರ್ಟರ್ಸ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಗರದ ಪಿ.ಸಿ.ಜಾಬಿನ್ ಕಾಲೇಜು ಕ್ವಾರ್ಟರ್ಸ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಪ್ರವೀಣ್ ಕುಮಾರ್(35) ಸಾವನ್ನಪ್ಪಿರುವ ಉಪನ್ಯಾಸಕ.
ಆದರೆ, ಉಪನ್ಯಾಸಕರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಉಪನ್ಯಾಸಕರು ದಾವಣಗೆರೆ ಜಿಲ್ಲೆಯ ನಿವಾಸಿ. ಕಳೆದ ನಾಲ್ಕು ವರ್ಷಗಳಿಂದ ಕಾಲೇಜಿನಲ್ಲಿ ಕೆಮಿಸ್ಟ್ರಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೇವಲ 10 ದಿನಗಳ ಹಿಂದೆಯಷ್ಟೇ ಪ್ರವೀಣ್ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ಖುಷಿಯಲ್ಲಿದ್ದ ಉಪನ್ಯಾಸಕರು ಏಕೆ ಸಾವನ್ನಪ್ಪಿದರು ಎಂಬ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.