ಬೆಂಗಳೂರು: ನೀವು ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಸೇರಿ ಯಾವುದೇ ಕೋರ್ಸ್ ಮುಗಿಸಿ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಮೈಸೂರಿನಲ್ಲಿ ಇದೇ ಅಕ್ಟೋಬರ್ 17ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಣಿ ಮಾಡಿಕೊಳ್ಳುವ ಮೂಲಕ ಉದ್ಯೋಗ ಪಡೆಯಬಹುದಾಗಿದೆ. 221 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಸುಮಾರು 45 ಸಾವಿರ ಮಂದಿಗೆ ಉದ್ಯೋಗ ನೀಡಲಿವೆ. ಈಗಾಗಲೇ 24 ಸಾವಿರ ಯುವಕ-ಯುವತಿಯರು ನೋಂದಣಿ ಮಾಡಿಕೊಂಡಿದ್ದಾರೆ.
ಉದ್ಯೋಗ ಮೇಳದ ಸಂಕ್ಷಿಪ್ತ ಮಾಹಿತಿ
ಉದ್ಯೋಗ ಮೇಳದ ಜಿಲ್ಲೆ: ಮೈಸೂರು
ದಿನಾಂಕ: ಅಕ್ಟೋಬರ್ 17
ಸ್ಥಳ: ಮಹಾರಾಜ ಕಾಲೇಜು ಮೈದಾನ, ಮೈಸೂರು
ಕಂಪನಿಗಳು ಭಾಗಿ: 221
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಹಾಗೂ ನೇರವಾಗಿ ಕಾರ್ಯಕ್ರಮದ ದಿನದಂದು ಆಗಮಿಸಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಯುವಕ-ಯುವತಿಯರು ಉದ್ಯೋಗ ಮೇಳದಲ್ಲಿ ಭಾಗವಹಿಸಲು https://udyogamela.ksdckarnataka.com ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಉದ್ಯೋಗ ಮೇಳದಲ್ಲಿ 221 ಕಂಪನಿಗಳು ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿವೆ. ಇನ್ನೂ ಎರಡು ದಿನ ಬಾಕಿ ಇರುವ ಕಾರಣ ಸ್ಥಳೀಯ ಕಂಪನಿಗಳು ಕೂಡ ಹೆಸರು ನೋಂದಾಯಿಸಿಕೊಳ್ಳಲಿದೆ. ಉದ್ಯೋಗದಾತರು ಸುಮಾರು 45,000 ಉದ್ಯೋಗ ಖಾಲಿ ಇರುವುದಾಗಿ ಮಾಹಿತಿ ನೀಡಿವೆ. ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡು, ಉದ್ಯೋಗ ಮೇಳದಲ್ಲಿ ಭಾಗವಹಿಸಿದ ನಂತರ ಉದ್ಯೋಗ ಸಿಗದಿದ್ದರೂ ಚಿಂತೆ ಮಾಡಬೇಕಿಲ್ಲ. ಉದ್ಯೋಗ ಸಿಗದಿರುವ ಅಭ್ಯರ್ಥಿಗಳ ವಿವರವನ್ನು ಪಡೆದುಕೊಂಡು ಅವರಿಗೆ ಬೇಕಿರುವ ಕೌಶಲಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.