ಬೆಂಗಳೂರು : ಬೆಂಗಳೂರಿನ ಚಾಮರಾಜಪೇಟೆ ಪ್ರದೇಶದ RSS ಕಚೇರಿ ಪಕ್ಕದ ರಸ್ತೆಯಲ್ಲಿ ಬೃಹತ್ ಮರ ಧರೆಗುಳಿದ ಘಟನೆ ನಡೆದಿದೆ.
ಮರ ಬಿದ್ದ ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಂದು ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ರಸ್ತೆಗೆ ಅಡ್ಡವಾಗಿ ಬಿದ್ದಿರುವ ಮರದಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸಂಚಾರ ವ್ಯತ್ಯಯ ಉಂಟಾಗಿದೆ.
ಘಟನೆ ನಿನ್ನೆ ರಾತ್ರಿ ಸಂಭವಿಸಿದ್ದರೂ ಇನ್ನೂ ಮರವನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



















