ಬೆಂಗಳೂರು: ರಾಜ್ಯದಲ್ಲಿ ರಾಗಿಗೆ ಹೆಚ್ಚಿನ ಬೇಡಿಕೆ ಯಾವಾಗಲೂ ಇದೆ. ಇತ್ತೀಚೆಗೆ ಬೇರೆ ಬೇರೆ ಪ್ರದೇಶಗಳಲ್ಲಿ ಕೂಡ ರಾಗಿಗೆ ಹೆಚ್ಚಿನ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ದರ ಏರಿಕೆಯಾಗಿದೆ.
ಚಿಲ್ಲರೆ ದರದಲ್ಲಿರಾಗಿ ಕೆಜಿಗೆ 40-45 ರೂ. ಇದ್ದ ರಾಗಿ, ಸದ್ಯ 55 ರೂ. ಗೆ ಏರಿಕೆಯಾಗಿದೆ. ಈ ಬಾರಿ ಸರಕಾರ ಕೂಡ ಕನಿಷ್ಠ ಬೆಂಬಲ ಬೆಲೆಯಡಿ ರಾಗಿಗೆ ಕ್ವಿಂಟಾಲ್‌ಗೆ 4,290 ರೂ. ನಿಗದಿ ಮಾಡಿದೆ. ಹಿಂದಿನ ವರ್ಷ ರಾಗಿಯ ಬೆಲೆ 3,846 ರೂ. ದರ ಇತ್ತು.
ಮಧು ಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಗೋಧಿಯ ಜೊತೆಗೆ ರಾಗಿ ಬಳಕೆದಾರರ ಸಂಖ್ಯೆಯೂ ಹೆಚ್ಚಾಗಿದೆ. ಮುದ್ದೆ, ಗಂಜಿ, ರೊಟ್ಟಿ ರೂಪದಲ್ಲಿ ರಾಗಿ ಬಳಕೆ ಹೆಚ್ಚಾಗುತ್ತಿದೆ. ಪೌಷ್ಟಿಕಭರಿತವಾಗಿರುವುದರಿಂದ ರಾಗಿಯನ್ನು ಮಕ್ಕಳಿಗೂ ಹೆಚ್ಚಾಗಿ ನೀಡಲಾಗುತ್ತಿದೆ. ಹೀಗಾಗಿ ಬೇಡಿಕೆ ಹೆಚ್ಚಾಗುತ್ತಿದ್ದು, ಬೆಲೆಯೂ ಏರಿಕೆಯಾಗುತ್ತಿದೆ.
ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರಾಗಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 8.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ಸುಮಾರು 11.27 ಲಕ್ಷ ಟನ್‌ಗಳಷ್ಟು ರಾಗಿ ಬೆಳೆಯಲಾಗುತ್ತದೆ.
ರಾಗಿ ಬೆಳೆಯುವುದರಲ್ಲಿ ರಾಗಿ ಮೊದಲ ಸ್ಥಾನದಲ್ಲಿದೆ. ವಾರ್ಷಿಕವಾಗಿ ಸುಮಾರು 22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆದು 26 ರಿಂದ 28 ಲಕ್ಷ ಟನ್ ರಾಗಿ ಉತ್ಪಾದಿಸಲಾಗುತ್ತಿದೆ. ರಾಗಿ ಉತ್ಪಾದನೆಯ ಮುಕ್ಕಾಲು ಪಾಲು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮತ್ತು ಮಹಾರಾಷ್ಟ್ರ ರಾಜ್ಯಗಳು ಉತ್ಪಾದಿಸುತ್ತಿವೆ. ಉತ್ತರ ಭಾರತದ ಹಲವೆಡೆ ಕೂಡ ಇದನ್ನು ಬೆಳೆಯಲಾಗುತ್ತದೆ. 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಕ್ವಿಂಟಾಲ್ ಗೆ 4290 ರೂ. ನಿಗದಿ ಮಾಡಲಾಗಿದೆ.