ಬೆಂಗಳೂರು : ಕಲಾಸಕ್ತರು ಚಿತ್ರ ಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಪ್ರತಿಯೊಬ್ಬರ ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಡಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ 22ನೇ ಚಿತ್ರ ಸಂತೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಚಿತ್ರದ ಮೂಲಕ ರಾಜ್ಯ ಮತ್ತು ಜಗತ್ತಿಗೆ ತಿಳಿಸಬೇಕೆಂಬ ಪ್ರಯತ್ನದಿಂದಾಗಿ ಈ ಸಂತೆ ಆಯೋಜಿಸಲಾಗಿದೆ ಎಂದರು.
ಚಿತ್ರ ಸಂತೆಯಲ್ಲಿ 22 ರಾಜ್ಯಗಳ ಕಲಾವಿದರು ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಜಗತ್ತಿನ ಯಾವ ಭಾಗದಲ್ಲಿಯೂ ಚಿತ್ರಸಂತೆ ನಡೆಯುವುದನ್ನು ನಾನು ನೋಡಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಚಿತ್ರಸಂತೆ ನಡೆಯುವುದು ಹೆಮ್ಮೆಯ ಸಂಗತಿ ಎಂದರು.
ಅನೇಕ ಚಿತ್ರಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಯನ್ನು ಪ್ರದರ್ಶಿಸಿ ಆಸಕ್ತರಿಗೆ ಕೊಳ್ಳುವ ಅವಕಾಶವನ್ನೂ ಚಿತ್ರದಂತೆ ಒದಗಿಸುತ್ತಿದೆ. ಒಂದು ದಿನಕ್ಕೆ ನಾಲ್ಕು ಲಕ್ಷ ಜನರು ಭೇಟಿ ನೀಡುತ್ತಾರೆ. ಬೆಂಗಳೂರಿಗೆ ಇದೊಂದು ಸುವರ್ಣಾವಕಾಶ ಎಂದರು.
ಈ ಬಾರಿಯ ಚಿತ್ರ ಸಂತೆಯನ್ನು ಹೆಣ್ಣು ಮಕ್ಕಳಿಗೆ ಸಮರ್ಪಣೆ ಮಾಡಿರುವುದು ವಿಶೇಷ. ಹೆಣ್ಣು ಮಕ್ಕಳ ಪರವಾಗಿ ಕೆಲಸ ಮಾಡಿದ ಮಹಾತ್ಮಾ ಗಾಂಧಿ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಯಶೋಧರಮ್ಮ ದಾಸಪ್ಪ, ದತ್ತಮ್ಮ ಸೇರಿದಂತೆ ಹಲವರ ಚಿತ್ರಗಳನ್ನು ಪ್ರದರ್ಶಿಸುವುದು ಸಂತಸದ ಸಂಗತಿ ಎಂದಿದ್ದಾರೆ.

















