ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬದ ನಾಯಕರನ್ನು ಬೆಳೆಸಿದ್ದು ಇದೇ ರಾಮನಗರ ಜಿಲ್ಲೆಯ ಜನರು. ನನಗೆ ಹಾಗೂ ರಾಮನಗರಕ್ಕೆ ಭಾವನಾತ್ಮಕ ಸಂಬಂಧವಿದೆ. ನಾನು ಕುಮಾರಸ್ವಾಮಿ ಅವರ ಜೊತೆ ಸೇರಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತೇನೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ದುಡಿದಿದ್ದಾರೆ. ನನಗೆ 87 ಸಾವಿರ ಮತದಾರರು ಬೆಂಬಲಿಸಿದ್ದಾರೆ. ಮತದಾರರಿಗೆ ನಾನು ತಲೆ ಬಾಗುತ್ತೇನೆ. ನನಗಾಗಿ ಹಗಲಿರುಳು ದುಡಿದ ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ. ಎಲ್ಲಿ ಎಡವಿದ್ದೇವೆ ಅಂತ ಚರ್ಚೆ ಮಾಡುತ್ತೇವೆ. ಈ ಸೋಲನ್ನು ನಾನೇ ಸ್ವೀಕಾರ ಮಾಡುತ್ತೇನೆ. ಸೋತಿದ್ದೇನೆ ಎಂದು ನಾನು ಸುಮ್ಮನೆ ಕೂಡುವುದಿಲ್ಲ. ನನ್ನ ಹೋರಾಟ ಎಂದಿನಂತೆ ನಡೆಯಲಿದೆ. ಮತದಾರರ ಆಶೀರ್ವಾದ ಇರುವವರೆಗೂ ನಾನು ಹೋರಾಟ ಮಾಡುತ್ತೇನೆ. ಒಂದು ಸಮುದಾಯದ ಮತದಾರರು ಕಾಂಗ್ರೆಸ್ ಪರ ನಿಂತಿದ್ದಾರೆ. ಆದರೆ, ನಾನು ಸೋಲಿನಿಂದ ಎದೆಗುಂದುವುದಿಲ್ಲ ಎಂದಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು ನಿಖಿಲ್ ಕುಮಾರಸ್ವಾಮಿ ವಿರುದ್ಧ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.