ಲಖನೌ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಬಾಲಕಿಯ ತುಂಡಾದ ದೇಹದ ಭಾಗಗಳು ಜಮೀನಿನೊಂದರಲ್ಲಿ ಪತ್ತೆಯಾಗಿವೆ. ಫೆಬ್ರವರಿ 25ರಂದೇ ಬಾಲಕಿಯು ನಾಪತ್ತೆಯಾಗಿದ್ದಳು. ಪೋಷಕರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಈಗ ಗದ್ದೆಯೊಂದರಲ್ಲಿ ಬಾಲಕಿಯ ದೇಹದ ತುಂಡುಗಳು ಪತ್ತೆಯಾಗಿವೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಪೋಷಕರ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಗದ್ದೆಯೊಂದರಲ್ಲಿ ಬಾಲಕಿಯ ಕಾಲು ಪತ್ತೆಯಾಗಿದ್ದವು. ಮೊದಲಿಗೆ ಕಾಡು ಪ್ರಾಣಿಗಳು ಬಾಲಕಿಯ ದೇಹವನ್ನು ತುಂಡರಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಪೋಷಕರ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಡ್ರೋನ್ ಮೂಲಕ ಬಾಲಕಿಯ ದೇಹದ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಮತ್ತೊಂದು ಗದ್ದೆಯಲ್ಲಿ ಬಾಲಕಿಯ ತಲೆ ಸೇರಿ ಹಲವು ಭಾಗಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಮೂವರ ಬಂಧನ
ಪೋಷಕರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಇದುವರೆಗೆ ಮೂವರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಇನ್ನೂ ಹಲವು ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. “ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ಮೊದಲಿಗೆ ಕಾಡು ಪ್ರಾಣಿಗಳು ದಾಳಿ ಮಾಡಿರಬಹುದು ಎಂದು ಶಂಕಿಸಲಾಗುತ್ತಿತ್ತು. ಈಗ ಪ್ರಕರಣಕ್ಕೆ ಹಲವು ತಿರುವುಗಳು ಸಿಗುತ್ತಿವೆ” ಎಂದು ಸೀತಾಪುರ ಅಡಿಷನಲ್ ಎಸ್ ಪಿ ಪ್ರವೀಣ್ ರಂಜನ್ ಮಾಹಿತಿ ನೀಡಿದ್ದಾರೆ.
ಬಿಜೆಪಿ ಶಾಸಕಿ, ರಾಜ್ಯ ಮಹಿಳಾ ಆಯೋಗದ ಸದಸ್ಯೆಯೂ ಆಗಿರುವ ಗ್ಯಾನ್ ತಿವಾರಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಮಥುರಾ ಪೊಲೀಸ್ ಠಾಣೆಯ ಬಳಿಯ ಜಮೀನಿನಲ್ಲೇ ಶವ ಪತ್ತೆಯಾಗಿರುವ ಕಾರಣ ಸಾರ್ವಜನಿಕರು ಹೆಣ್ಣುಮಕ್ಕಳ ಭದ್ರತೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.