ಉಡುಪಿ : ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸೋಮವಾರ ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ, ಕ್ಷೀರಾಬ್ದಿ ಪೂಜೆ, ರಾತ್ರಿ ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವದೊಂದಿಗೆ ವಾರ್ಷಿಕ ರಥೋತ್ಸವ ಆರಂಭವಾಗಿದೆ.
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಪಶ್ಚಿಮಜಾಗರ ಪೂಜೆಯನ್ನು ಶ್ರೀಪಾದರು ಸಮಾಪನಗೊಳಿಸಿ, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಹಾಪೂಜೆ, ತುಳಸಿ ಪೂಜೆಯನ್ನು ನೆರವೇರಿಸಿದರು.

ರಥಬೀದಿಯಲ್ಲಿ ಅಳವಡಿಸಿದ ದಳಿಗಳ ಮೇಲೆ ಗೋಮಯವನ್ನು ಇಟ್ಟು ಅದರ ಮೇಲೆ ಹಣತೆ ಇಡುವ ಮುಹೂರ್ತವನ್ನು ಸ್ವಾಮೀಜಿಯವರು ನೆರವೇರಿಸಿದರು. ಸಂಜೆ ಕ್ಷೀರಾಬ್ದಿ ಪೂಜೆ ಬಳಿಕ ರಾತ್ರಿ ಪೂಜೆ ನಡೆಯಿತು.

ಪೂಜೆ ಬಳಿಕ ಉತ್ಸವ ಮೂರ್ತಿಯನ್ನು ತಂದು ಪಾರ್ಥ ಸಾರಥಿಯಾಗಿ ಅಲಂಕರಿಸಿದ್ದ ತೆಪ್ಪದಲ್ಲಿ ಕೂರಿಸಿ, ಮಧ್ವ ಸರೋವರದಲ್ಲಿ ದಾಸರ ಹಾಡುಗಳ ಸುಮಧುರ ಗಾಯನದ ನಡುವೆ ತೆಪ್ಪೋತ್ಸವ ನೆರವೇರಿತು.

ಬಳಿಕ ಶ್ರೀಕೃಷ್ಣ ಮುಖ್ಯಪ್ರಾಣ, ಶ್ರೀಅನಂತೇಶ್ವರ, ಶ್ರೀಚಂದ್ರಮೌಳೀಶ್ವರ ಸಹಿತ ರಥೋತ್ಸವ ಆರಂಭಗೊಂಡಿತು. ದೇವರ ಉತ್ಸವ ಮೂರ್ತಿಗಳನ್ನು ಗರುಡ ರಥ ಮತ್ತು ಮಹಾಪೂಜಾ ರಥಗಳಲ್ಲಿರಿಸಿ ಉತ್ಸವ ನಡೆಸಲಾಯಿತು. ಇದೇ ವೇಳೆ ರಥಬೀದಿ, ಮಧ್ವಸರೋವರದಲ್ಲಿ ಸಾವಿರಾರು ಹಣತೆಗಳ ದೀಪಗಳನ್ನು ಭಕ್ತರು ಹಚ್ಚಿದರು.

ಉತ್ಸವದಲ್ಲಿ ಪರ್ಯಾಯ ಶ್ರೀಗಳು, ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಪಾಲ್ಗೊಂಡಿದ್ದು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಣತೆ ಇಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇನ್ನು, ನಿನ್ನೆ(ನೆ.3) ಆರಂಭಗೊಂಡ ಲಕ್ಷದೀಪೋತ್ಸವವು ನಾಳೆ (ನ.5)ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಇದನ್ನೂ ಓದಿ: ಉಡುಪಿ | ಕೋಟೇಶ್ವರದಿಂದ ಕುಕ್ಕೆ ಸುಬ್ರಹ್ಮಣ್ಯದೆಡೆಗೆ ಹೊರಟ 1.80 ಕೋಟಿ ವೆಚ್ಚದ ಬೆಳ್ಳಿರಥ



















