ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಶ್ಲಾಘಿಸಿ ಹಾಕಿದ ಒಂದು ಪೋಸ್ಟ್ ಈಗ ಕಾಂಗ್ರೆಸ್ ಪಕ್ಷದೊಳಗೆ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಈ ವಿಚಾರವಾಗಿ ಪಕ್ಷದ ನಾಯಕರು ಎರಡು ಬಣಗಳಾಗಿ ವಿಭಜನೆಯಾಗಿದ್ದು, ಪರ-ವಿರೋಧದ ಚರ್ಚೆಗಳು ತಾರಕಕ್ಕೇರಿವೆ.
ವಿವಾದಕ್ಕೆ ಕಾರಣವೇನು?
ದಿಗ್ವಿಜಯ್ ಸಿಂಗ್ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ಪಕ್ಕದಲ್ಲಿ ನೆಲದ ಮೇಲೆ ಕುಳಿತಿರುವುದನ್ನು ತೋರಿಸಲಾಗಿತ್ತು. “ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತರು ಕೂಡ ಉನ್ನತ ಮಟ್ಟಕ್ಕೆ ಬೆಳೆಯಲು ಅವಕಾಶವಿದೆ” ಎಂದು ಸಿಂಗ್ ಬರೆದುಕೊಂಡಿದ್ದರು. ಇದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
“ಗಾಂಧಿ ಹಂತಕರಿಂದ ಕಲಿಯುವುದು ಏನೂ ಇಲ್ಲ”: ಕಾಂಗ್ರೆಸ್
ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ದಿಗ್ವಿಜಯ್ ಸಿಂಗ್, “ನಾನು ಆರ್‌ಎಸ್‌ಎಸ್ ಸಿದ್ಧಾಂತದ ಕಟ್ಟಾ ವಿರೋಧಿ. ಆದರೆ ಸಂಘಟನೆಯನ್ನು ಬಲಪಡಿಸುವ ಅಗತ್ಯದ ಬಗ್ಗೆ ಮಾತನಾಡಿದ್ದೆ ಅಷ್ಟೆ. ಗಾಂಧೀಜಿಯ ಹಂತಕರಿಂದ (ಗೋಡ್ಸೆ ಬೆಂಬಲಿಗರಿಂದ) ಕಲಿಯುವುದು ಏನೂ ಇಲ್ಲ” ಎಂದು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದರು.
ಆದರೆ, ಕಾಂಗ್ರೆಸ್‌ನ ಇತರ ನಾಯಕರು ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ:
“ಗೋಡ್ಸೆ ಬೆಂಬಲಿಗರು ಎಂದಿಗೂ ಗಾಂಧಿ ಬೆಂಬಲಿಗರಾಗಲು ಸಾಧ್ಯವಿಲ್ಲ. ದಿಗ್ವಿಜಯ್ ಸಿಂಗ್ ಅವರ ಮಾತನ್ನು ನಾನು ಒಪ್ಪುವುದಿಲ್ಲ” ಎಂದು ಪಕ್ಷದ ನಾಯಕ ಪವನ್ ಖೇರಾ ನೇರವಾಗಿ ಟೀಕಿಸಿದ್ದಾರೆ. ಇನ್ನು ಮತ್ತೊಬ್ಬ ನಾಯಕ ಮಾಣಿಕ್ಯಂ ಟ್ಯಾಗೋರ್, ಆರ್‌ಎಸ್‌ಎಸ್ ಅನ್ನು ಅಲ್-ಖೈದಾ ಉಗ್ರ ಸಂಘಟನೆಗೆ ಹೋಲಿಸಿದ್ದು, “ದ್ವೇಷ ಹರಡುವವರಿಂದ ನಾವು ಕಲಿಯುವ ಅಗತ್ಯವಿಲ್ಲ” ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ “ನಮ್ಮ ಬೆನ್ನೆಲುಬು ದುರ್ಬಲವಾಗಿಲ್ಲ. ನಾವು ಧರ್ಮದ ಹೆಸರಿನಲ್ಲಿ ಮತ ಕೇಳುವುದಿಲ್ಲ. ಬಿಜೆಪಿಗೆ ಅಧಿಕಾರವಿದ್ದರೂ ಸತ್ಯದ ಹಾದಿ ಅವರದ್ದಲ್ಲ” ಎಂದು ಮಾರ್ಮಿಕವಾಗಿ ತಿವಿದಿದ್ದಾರೆ.
ಸಿಂಗ್ ಪರವಾಗಿ ನಿಂತವರು ಯಾರು?
ವಿವಾದದ ನಡುವೆಯೂ ಶಶಿ ತರೂರ್ ಮತ್ತು ಸಲ್ಮಾನ್ ಖುರ್ಷಿದ್ ಅವರಂತಹ ನಾಯಕರು ದಿಗ್ವಿಜಯ್ ಸಿಂಗ್ ಅವರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ. “ಯಾವುದೇ ಸಂಘಟನೆಯಲ್ಲಿ ಶಿಸ್ತು ಇರುವುದು ಮತ್ತು ಅದು ಬಲಗೊಳ್ಳುವುದು ತರ್ಕಬದ್ಧವಾಗಿದೆ” ಎಂದು ಹೇಳುವ ಮೂಲಕ ಶಶಿ ತರೂರ್ ಅವರು ದಿಗ್ವಿಜಯ್ ಸಿಂಗ್ ಅವರ ಮಾತನ್ನು ಬೆಂಬಲಿಸಿದ್ದಾರೆ. ಇನ್ನು ಸಲ್ಮಾನ್ ಖುರ್ಷಿದ್ ಪ್ರತಿಕ್ರಿಯಿಸಿ, “ದಿಗ್ವಿಜಯ್ ಸಿಂಗ್ ಅನೇಕರಿಗೆ ಸ್ಫೂರ್ತಿ. ಆರ್‌ಎಸ್‌ಎಸ್ ಏನನ್ನು ಸಾಧಿಸಿದೆ ಎಂಬುದು ವಾಸ್ತವಿಕ ಮೌಲ್ಯಮಾಪನ ಅಷ್ಟೇ, ಅವರು ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿದ್ದಾರೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಪಕ್ಷವನ್ನು ಬಲಪಡಿಸುವತ್ತ ಕಾಂಗ್ರೆಸ್ ಗಮನಹರಿಸುತ್ತಿರುವ ಹೊತ್ತಲ್ಲೇ, ಈ ‘ಆರ್‌ಎಸ್‌ಎಸ್ ಶಿಸ್ತಿನ’ ಚರ್ಚೆ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯವನ್ನು ಬೀದಿಗೆ ತಂದಿದೆ.
ಇದನ್ನೂ ಓದಿ : ಆಪರೇಷನ್ ಸಿಂದೂರ’ ವೇಳೆ ಬಂಕರ್‌ಗೆ ಹೋಗಲು ಸಲಹೆ ನೀಡಲಾಗಿತ್ತು: ಸತ್ಯ ಒಪ್ಪಿಕೊಂಡ ಪಾಕ್ ಅಧ್ಯಕ್ಷ



















