ಬೆಂಗಳೂರು : ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡದ ಮೇಲೆ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪದಡಿ ಬಿಹಾರ ಮೂಲದ ಕಾರ್ಮಿಕನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಮುನ್ನಾ (25) ಬಂಧಿತ. 11 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಬಾಲಕಿಯ ಪೋಷಕರು ಕಲಬುರಗಿ ಮೂಲದವರಾಗಿದ್ದು, ಹಲವು ವರ್ಷಗಳಿಂದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಬುಧವಾರ ಸಂಜೆ ಮನೆಗೆ ಬಂದಾಗ ಬಾಲಕಿಯ ಕೈಯಲ್ಲಿ 150 ರೂಪಾಯಿ ಇರುವುದನ್ನು ತಾಯಿ ಗಮನಿಸಿ ಪ್ರಶ್ನಿಸಿದಾಗ ಆಕೆ ಸರಿಯಾಗಿ ಉತ್ತರಿಸಿರಲಿಲ್ಲ. ಬಳಿಕ ಒತ್ತಾಯದಿಂದ ಪ್ರಶ್ನಿಸಿದಾಗ ”ತಮ್ಮ ಮನೆ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ತನ್ನನ್ನ ಬಿಲ್ಡಿಂಗ್ ಮೇಲೆ ಕರೆದೊಯ್ದು ಅಸಭ್ಯವಾಗಿ ಮುಟ್ಟಿದ. ಬಳಿಕ ಹಣ ನೀಡಿ ಈ ವಿಚಾರವನ್ನು ಯಾರಿಗೂ ಹೇಳಬಾರದೆಂದು ಹೇಳಿ ಕಳುಹಿಸಿದ. ಏ.7ರಂದು ಸಹ ಇದೇ ರೀತಿ ತನ್ನೊಂದಿಗೆ ವರ್ತಿಸಿದ್ದ” ಎಂದು ಬಾಲಕಿ ಹೇಳಿದ್ದಳು.
ಈ ವಿಚಾರ ತಿಳಿದು ಆತಂಕಗೊಂಡ ಪೋಷಕರು, ನಿರ್ಮಾಣ ಹಂತದ ಕಟ್ಟಡದ ಬಳಿ ಹೋಗುತ್ತಿದ್ದಂತೆ ಆರೋಪಿ ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದ. ಸದ್ಯ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ – ಯಾವ ಜಿಲ್ಲೆ ಫಸ್ಟ್, ಯಾವುದು ಲಾಸ್ಟ್? ಇಲ್ಲಿದೆ ಲಿಸ್ಟ್!



















