ಬೆಂಗಳೂರು: 2025ರ ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾನ ತಂಡದ ತ್ವರಿತ ನಿರ್ಗಮನದ ಬಗ್ಗೆ ಪಾಕಿಸ್ತಾನ ವೇಗದ ಬೌಲರ್ ಹಸನ್ ಅಲಿ ಹತಾಶೆ ವ್ಯಕ್ತಪಡಿಸಿದ್ದು, ಆಟಗಾರರ ಅಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ವಿರುದ್ಧ ಕಿಡಿಕಾರಿದ್ದಾರೆ. ಈ ವೇಳೆ ಕೋಚ್ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸಿದರು.
ಪಾಕಿಸ್ತಾನ ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ತನ್ನ ಅತ್ಯಂತ ಸಂಕಟದ ಕಾಲದಲ್ಲಿದೆ. ತಮ್ಮದೇ ನೆಲದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ವಿಶ್ವದ ಟಾಪ್ ತಂಡಗಳೊಂದಿಗೆ ಸೆಣಸುವ ಯಾವ ಶಕ್ತಿಯೂ ಇರಲಿಲ್ಲ ಎಂದು ಹೇಳಿದ್ದಾರೆ.
ಶಾಹೀನ್ ಆಫ್ರಿದಿ ಬಗ್ಗೆ ಬೇಸರ
“ನೀವು ನಿಮ್ಮ ಪ್ರಮುಖ ಬೌಲರ್ ಶಾಹೀನ್ (ಆಫ್ರಿದಿ) ಅವರನ್ನು ದಕ್ಷಿಣ ಆಫ್ರಿಕಾ ಸರಣಿಗೆ ಡ್ರಾಪ್ ಮಾಡಿದ್ದೀರಿ. ನೀವು ಅವರಿಗೆ ವಿಶ್ರಾಂತಿ ನೀಡಿದ್ದೇವೆ ಎಂದು ಹೇಳಿದ್ದೀರಿ. ಅವರು ಬಿಪಿಎಲ್ (ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್) ನಲ್ಲಿ ಆಡಿದ್ದು ಹೇಗೆ” ಎಂದು ಹಸನ್ ಅಲಿ ಪ್ರಶ್ನಿಸಿದ್ದಾರೆ.
ಶಾಹೀನ್ ಆಫ್ರಿದಿ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ತಂಡದ ಭಾಗವಾಗಿರಲಿಲ್ಲ. ಆದರೆ ಪಿಸಿಬಿ ಈ ನಿರ್ಧಾರವನ್ನು ಸಮರ್ಥಿಸಿಕೊಂಡು, ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿತ್ತು . ಆದರೆ ಅದೇ ಸಮಯದಲ್ಲಿ, ಆಫ್ರಿದಿಗೆ ಬಿಪಿಎಲ್‌ನಲ್ಲಿ ಆಡಲು ಅನುಮತಿ ನೀಡಲಾಯಿತು, ಇದರಿಂದ ಪಿಸಿಬಿಯ ನಿರ್ಧಾರದಲ್ಲಿ ಗೊಂದಲ ಉಂಟಾಗಿದೆ.
ಆಟಗಾರ ನಿರ್ವಹಣೆ ಬಗ್ಗೆ ಟೀಕೆ
ಹಸನ್ ಅಲಿ ತಾವು ತಂಡದಿಂದ ಹೊರಗುಳಿದ ಘಟನೆಯನ್ನು ಇದೇ ವೇಳೆ ವಿವರಿಸಿದರು. ತಂಡದಿಂದ ಕೈಬಿಟ್ಟಿದ್ದಕ್ಕೆ ಕಾರಣ ಕೋಚ್ ಮತ್ತು ನಾಯಕ ಬಾಬರ್ ಆಜಂ ವಿಭಿನ್ನ ಉತ್ತರ ನೀಡಿದ್ದರು ಎಂದು ಅವರು ಹೇಳಿದ್ದಾರೆ.
“ನಾನು ಡ್ರಾಪ್ ಆದಾಗ, ಮೂರು ವಿಭಿನ್ನ ಅಭಿಪ್ರಾಯಗಳನ್ನು ಕೇಳಿದ್ದೆ. ಬಾಬರ್ (ಆಜಂ) ನನಗೆ ನೀವು ಉತ್ತಮ ಪ್ರದರ್ಶನ ನೀಡಿಲ್ಲ ಎಂದು ಹೇಳಿದರು. ನಾನು ಅದನ್ನು ಒಪ್ಪಿಕೊಂಡೆ. ಆಯ್ಕೆದಾರರೊಬ್ಬರು ಹೊಸ ಆಟಗಾರರನ್ನು ಪ್ರಯೋಗಿಸಲು ಬಯಸಿದ್ದೇವೆ ಎಂದು ಹೇಳಿದರು,” ಎಂದು ಹಸನ್ ಅಲಿ ತಮಗಾದ ನೋವನ್ನು ವಿವರಿಸಿದ್ದಾರೆ.
“ಮುಖ್ಯ ಕೋಚ್ ಮಾತ್ರ ನನಗೆ ವಿಶ್ರಾಂತಿ ನೀಡಲಾಗಿದೆ ಎಂದು ಹೇಳಿದರು. ನಾನು ಅವರ ಕೋಣೆಗೂ ಹೋಗಿ, ಸ್ಪಷ್ಟವಾದ ಉತ್ತರ ಕೇಳಿದಾಗಲೂ ಅವರು ಅಸ್ಪಷ್ಟ ಉತ್ತರ ನೀಡಿದರು,” ಎಂದು ಅಲಿ ಸ್ಮರಿಸಿಕೊಂಡಿದ್ದಾರೆ.
“ಮೊದಲು ಅವರು ನೀವು ವಿಶ್ರಾಂತಿ ಪಡೆಯಿರಿ ಎಂದು ಹೇಳಿದರು. ಆದರೆ ನಾನು ಸ್ಪಷ್ಟವಾಗಿ ಕೇಳಿದಾಗ, ‘ನಾವು ನಿಮ್ಮನ್ನು ಡ್ರಾಪ್ ಮಾಡುತ್ತಿದ್ದೇವೆ, ಆದರೆ ನೀವು ಇದನ್ನು ವಿಶ್ರಾಂತಿ ಎಂದು ಭಾವಿಸಿ’ ಎಂದು ಹೇಳಿದ್ದರು,” ಎಂದು ಹಸನ್ ಅಲಿ ಆರೋಪಿಸಿದರು.
ಹಸನ್ ಅಲಿ ಅವರ ಕೊನೆಯ ಅಂತರಾಷ್ಟ್ರೀಯ ಪಂದ್ಯ
ಹಸನ್ ಅಲಿ ಕೊನೆಯ ಬಾರಿ ಮೇ 2024ರಲ್ಲಿ ಅಂತರಾಷ್ಟ್ರೀಯ ಪಂದ್ಯವಾಡಿದ್ದರು. ಅವರು ಐರ್ಲೆಂಡ್ ವಿರುದ್ಧ ಡಬ್ಲಿನ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಪರ ಆಡಿದರು. ಅದಾದ ಬಳಿಕ, ಆಯ್ಕೆದಾರರು ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.
ಅವರು ಒಡಿಐಗಳಲ್ಲಿ 66 ಪಂದ್ಯಗಳಲ್ಲಿ 100 ವಿಕೆಟ್ ಕಬಳಿಸಿದ್ದು, ಸರಾಸರಿ 30.84 ಆಗಿದೆ. ಟಿ20ಐಗಳಲ್ಲಿ 51 ಪಂದ್ಯಗಳಲ್ಲಿ 60 ವಿಕೆಟ್ ಪಡೆದಿದ್ದು, ಅವರ ಸರಾಸರಿ 24.26 ಮತ್ತು ಎಕಾನಮಿ ದರ 8.45 ಆಗಿದೆ.
ಚಾಂಪಿಯನ್ಸ್ ಟ್ರೋಫಿಯ ನಿರಾಶಾದಾಯಕ ಪ್ರದರ್ಶನದ ನಂತರ, ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಪ್ರಮುಖ ಬದಲಾವಣೆಗಳ ನಿರೀಕ್ಷೆಯಿದೆ. ಪಾಕಿಸ್ತಾನ ತಂಡದ ಆಡಳಿತ ವ್ಯವಸ್ಥೆಗೂ ಮತ್ತು ನಿರ್ಧಾರಗಳಿಗೂ ತೀವ್ರ ಟೀಕೆ ವ್ಯಕ್ತವಾಗಿದೆ.