ಬೆಳಗಾವಿ: ಇಲ್ಲಿಯ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಹಲವಾರು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬೆಳಗಾವಿ ಕೈಗಾರಿಕಾ ಪ್ರದೇಶದಲ್ಲಿನ ಇನ್ಸುಲೆನ್ ಟೇಪ್ ಉತ್ಪಾದನೆಯ ಸ್ನೇಹಂ ಕಾರ್ಖಾನೆಯಲ್ಲಿ ಈ ಅವಘಡ ಸಂಭವಿಸಿದೆ. ಕಾರ್ಖಾನೆಯ ಲಿಫ್ಟ್ ನಲ್ಲಿ ಮಂಗಳವಾರ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಆಗ ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಕಾರ್ಖಾನೆಗೆ ಬೆಂಕಿ ವ್ಯಾಪಿಸಿದೆ. ಹೀಗಾಗಿ ಒಳಗೆ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತೆರಳಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ. ಎರಡನೇ ಶಿಫ್ಟ್ ಬಿಡುವ ವೇಳೆ ಏಕಾಏಕಿ ಲಿಫ್ಟ್ ನಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಧಗ ಧಗಿಸಿ ಇಡೀ ಫ್ಯಾಕ್ಟರಿಗೆ ಆವರಿಸಿಕೊಂಡಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಆಗಮಿಸಿದ್ದಾರೆ. ಸ್ಥಳದಲ್ಲಿ ಐದು ಆ್ಯಂಬುಲೆನ್ಸ್ ಗಳನ್ನು ನಿಲ್ಲಿಸಲಾಗಿದೆ. ಕೆಲ ಕಾರ್ಮಿಕರು ಬೆಂಕಿಯನ್ನು ನೋಡಿ ಹೊರಗಡೆ ಓಡೋಡಿ ಬಂದಿದ್ದಾರೆ. ಓರ್ವ ಕಾರ್ಮಿಕ ಲಿಫ್ಟ್ ನಲ್ಲಿ ಸಿಲುಕಿದ್ದಾನೆ ಎಂದು ತಿಳಿದು ಬಂದಿದೆ. ಆರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.