ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಶೋರೂಂ ಧಗಧಗಿಸಿ ಯುವತಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಅಗ್ನಿ ಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆಯದ ಹಾಗೂ ಅಗ್ನಿ ನಂದಿಸುವ ಉಪಕರಣಗಳನ್ನು ಹೊಂದದ, ಫೈರ್ ಡ್ರಿಲ್ ಮಾಡಿಸದ ಯಾವುದೇ ಶೋರೂಂಗಳು, ಶಾಲಾ ಕಾಲೇಜುಗಳು, ಗೋಡೌನ್‌ಗಳು ಹಾಗೂ ಅಗ್ನಿ ಸೂಕ್ಷ್ಮ ಪ್ರದೇಶಗಳ ಪರವನಾಗಿಯನ್ನು (ಲೈಸೆನ್ಸ್) ಸರ್ಕಾರ ರದ್ದು ಪಡಿಸಬೇಕು ಆಗ್ರಹಿಸಿದ್ದಾರೆ. ಅಗ್ನಿ ಸುರಕ್ಷತೆ ಇಲ್ಲದೆ ಶೋರೂಂ ನಡೆಸುತ್ತಿದ್ದ ಮಾಲೀಕನನ್ನು ಪೊಲೀಸರು ಆದಷ್ಟು ಬೇಗ ಬಂಧಿಸಲಿ. ಸಜೀವವಾಗಿ ದಹನವಾಗಿರುವ ಯುವತಿಯ ಕುಟುಂಬಸ್ಥರಿಗೆ ಮಾಲೀಕರಿಂದಲೇ ದೇಣಿಗೆ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಫೈರ್ ಡ್ರಿಲ್ ಒಂದು ಮನೋರಂಜನಾ ಕಾರ್ಯವಾಗದೆ, ಕೆಲಸ ಮಾಡುವ ಸಿಬ್ಬಂದಿ ಅಗ್ನಿ ಆಕಸ್ಮಿಕ ಸಂಭವಿಸಿದಾಗ ಏನು ಮಾಡಬೇಕು ಎಂಬುದನ್ನು ಸರಿಯಾಗಿ ಕಲಿಯಬೇಕು. ಫೈರ್ ಡ್ರಿಲ್ ಅನ್ನು ಆಸ್ಪತ್ರೆಗಳಲ್ಲಿ, ಅಗ್ನಿ ಸೂಕ್ಷ್ಮ ವಲಯಗಳಲ್ಲಿ, ಫ್ಯಾಕ್ಟರಿ, ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಎಲೆಕ್ಟ್ರಿಕ್ ವಾಹನ ಶೋರೂಂನಲ್ಲಿ ನಿನ್ನೆ ಅಗ್ನಿ ಅವಘಡ ಸಂಭವಿಸಿತ್ತು. ಶೋರೂಂನಲ್ಲಿದ್ದ ಯುವತಿ ಈ ಅವಘಡದಲ್ಲಿ ಸಜೀವವಾಗಿ ದಹನಗೊಂಡಿದ್ದಾರೆ.


















