ಬೆಂಗಳೂರು: ಕಳೆದ ಕೆಲವುವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ರೌಡಿ ಶೀಟರ್ ಮುನ್ನಾನನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಶೂಟೌಟ್ ಗೆ ಬಲಿಯಾದ ಹುತಾತ್ಮ ಪೊಲೀಸ್ ಅಧಿಕಾರಿ(ಪಿ.ಎಸ್.ಐ) ಮಲ್ಲಿಕಾರ್ಜುನ ಬಂಡೆ ಅವರ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ. ನೈಜ ಘಟನೆ ಆಧಾರಿತ ಈ ಚಿತ್ರಕ್ಕೆ “ಬಂಡೆ ಸಾಹೇಬ್” ಎಂದು ಹೆಸರಿಡಲಾಗಿದೆ.

ಚಿತ್ರದ ನಾಯಕನಾಗಿ ಸಂತೋಷ್ ರಾಮ್ ನಟಿಸಿದ್ದಾರೆ. “ಕೃಷ್ಣ ರುಕ್ಮಿಣಿ” ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಹಾಗೂ “ಟೋನಿ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿರುವ ಸಂತೋಷ್ ರಾಮ್, “ಪಂಟ್ರು” ಚಿತ್ರದ ಮೂಲಕ ನಾಯಕನಾದರು. ಸಂತೋಷ್ ರಾಮ್ ಅವರಿಗೆ ನಾಯಕನಾಗಿ ಇದು ಎರಡನೇ ಚಿತ್ರ. ದಕ್ಷ ಪೊಲೀಸ್ ಅಧಿಕಾರಿಯೊಬ್ಬರ ಪಾತ್ರದಲ್ಲಿ ಅಭಿನಯಿಸಿರುವುದು ನಿಜಕ್ಕೂ ಹೆಮ್ಮೆ ಎನ್ನುತ್ತಾರೆ ನಾಯಕ ಸಂತೋಷ್ ರಾಮ್. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕಾವ್ಯ ಭಾರದ್ವಾಜ್ ಈ ಚಿತ್ರದ ನಾಯಕಿ. ವೀರಣ್ಣ ಕೊರಳ್ಳಿ, ಬಿರಾದಾರ್, ಸಿಂಬಾ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಮಲ್ಲಿಗೆ ಸಿನಿ ಕಂಬೈನ್ಸ್ ಲಾಂಛನದಲ್ಲಿ ಗೋಪಣ್ಣ ದೊಡ್ಮನಿ, ಕಮಲ ದೊಡ್ಮನಿ ಹಾಗೂ ಮಾಲ ವಿ ಕೊರಳ್ಳಿ ಅವರು ನಿರ್ಮಿಸಿರುವ ಈ ಚಿತ್ರವನ್ನು ಚಿನ್ಮಯ್ ರಾಮ್ ನಿರ್ದೇಶಿಸಿದ್ದಾರೆ. “ಕುರುಕ್ಷೇತ್ರ”, ” ದಿ ವಿಲನ್” ಸೇರಿದಂತೆ ಕೆಲವು ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿರುವ ಚಿನ್ಮಯ್ ರಾಮ್ ಅವರಿಗೆ “ಬಂಡೆ ಸಾಹೇಬ್” ಮೊದಲ ನಿರ್ದೇಶನದ ಚಿತ್ರ.

ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಗುಲ್ಬರ್ಗ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಎಂ.ಎಸ್ ತ್ಯಾಗರಾಜ್ ಸಂಗೀತ ನೀಡಿರುವ ನಾಲ್ಕು ಹಾಡುಗಳಿದೆ. ಸದ್ಯದಲ್ಲೇ ಹೆಸರಾಂತ ಮ್ಯೂಸಿಕ್ ಸಂಸ್ಥೆಯ ಮೂಲಕ ಹಾಡುಗಳ ಅನಾವರಣವಾಗಲಿದೆ.
ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ವೀರಣ್ಣ ಕೊರಳ್ಳಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಮುಂಜಾನೆ ಮಂಜು ಛಾಯಾಗ್ರಹಣ ಹಾಗೂ ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ “ಬಂಡೆ ಸಾಹೇಬ್” ಚಿತ್ರಕ್ಕಿದೆ.