ವಿಜಯನಗರ: ಕುಡಿದ ಮತ್ತಿನಲ್ಲಿ ಸ್ನೇಹಿತರಿಬ್ಬರ ಮಧ್ಯೆ ಜಗಳ ನಡೆದು, ಕೊಲೆಯಲ್ಲಿ ಅಂತ್ಯವಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ(Hospete) ನಗರದ ಸಿದ್ದಲಿಂಗಪ್ಪ ಕ್ರಾಸ ಹತ್ತಿರ ಈ ಘಟನೆ ನಡೆದಿದೆ. ಶಾಂತಕುಮಾರ (25) ಕೊಲೆಯಾದ ದುರ್ದೈವಿ. ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಇಬ್ಬರು ಸ್ನೇಹಿತರು ನಡು ರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದಾರೆ.
ಆರೋಪಿ ಹುಲಿಗೇಶ ಎಂಬ ವ್ಯಕ್ತಿ ಕೈಯಿಂದ ತೆಲೆಗೆ ಜೋರಾಗಿ ಹೊಡೆದ ಪರಿಣಾಮ ಶಾಂತಕುಮಾರ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ನೆಲಕ್ಕೆ ಬೀಳುತ್ತಿದ್ದಂತೆ ಹುಲಿಗೇಶ ಮನ ಬಂದಂತೆ ಕಾಲಿನಿಂದ ಒದ್ದಿದ್ದಾನೆ. ಆಗ ಪ್ರಜ್ಞೆಯಿಲ್ಲದೆ ನೆಲಕ್ಕೆ ಬಿದ್ದಿದ್ದ ಶಾಂತಕುಮಾರನನ್ನು ಸ್ಥಳೀಯರು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಅಲ್ಲಿಂದ ಕೊಪ್ಪಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹೊಸಪೇಟೆ ಪಟ್ಟಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.