ವಿಜಯಪುರ: ತಮ್ಮ ಜಮೀನಿನಲ್ಲಿ ಬೇರೆ ರೈತರಿಗೆ ದಾರಿ ನೀಡಬೇಕೆಂದು ಒತ್ತಾಯಿಸಿ ಸಹಿ ಮಾಡಿಸಿಕೊಂಡಿದ್ದಾರೆಂದು ಆರೋಪಿಸಿ ರೈತ ಮಹಿಳೆಯೊಬ್ಬರು ವಿಷದ ಬಾಟಲಿ ಹಿಡಿದು ಸಿಂದಗಿ ತಹಶೀಲ್ದಾರ್(Sindagi Tahsildar) ಕಚೇರಿ ಎದುರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಜಿಲ್ಲೆಯ ಚಾಂದಕವಟೆ ಗ್ರಾಮದ ಶಾಮಲಾಬಾಯಿ ಸುಳ್ಳೊಳ್ಳಿ ಎಂಬುವವರು ‘ಪಕ್ಕದ ಜಮೀನಿನವರಿಗೆ ದಾರಿ ಇದ್ದರೂ ನಮ್ಮದೇ ಜಮೀನಿನಲ್ಲಿ ಹಾಯ್ದು ಹೋಗಲು ಗ್ರಾಮ ಲೆಕ್ಕಿಗ ಪಿ.ಕೆ. ಹುಡೇದ್ ನನ್ನ ಬಳಿ ಒತ್ತಾಯಪೂರ್ವಕವಾಗಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ನನ್ನ ಹಾಗೂ ಮಗನಿಂದ ಒತ್ತಾಯ ಪೂರ್ವಕವಾಗಿ ಸಹಿ ಮಾಡಿಸಿಕೊಂಡಿದ್ದಾರೆಂದು ಆಕ್ರೋಶ ಹೊರಹಾಕಿ, ತಹಶೀಲ್ದಾರ್ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಪಟ್ಟು ಹಿಡಿದಿದ್ದಾರೆ. ಅಲ್ಲಿದ್ದವರು ಕೂಡಲೇ ತಹಶೀಲ್ದಾರ್ ಪ್ರದೀಪ್ ಹಿರೇಮಠ ಮುಂದೆ ಕರೆದುಕೊಂಡು ಹೋಗಿದ್ದಾರೆ. ಆದರೆ, ದಲಿತ ಸಮಾಜದ ಮಹಿಳೆ ಎಂಬ ಕಾರಣಕ್ಕೆ ಕೆಳಗೆ ಕೂರಿಸಿ ವಿಚಾರಿಸಿದ್ದಾರೆ ಎಂಬ ಆರೋಪ ಕೂಡ ತಹಸೀಲ್ದಾರ್ ಮೇಲೆ ಕೇಳಿ ಬಂದಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮಹಿಳೆಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
