ಕೊಲೆ ಪ್ರಕರಣದಲ್ಲಿ ದರ್ಶನ್ (Darshan) ಅರೆಸ್ಟ್ ಆಗಿದ್ದು, ಅವರ ಕೆಲವು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅನೇಕರು ಪೊಲೀಸ್ ಠಾಣೆಯ ಎದುರು ಜಮಾಯಿಸಿ ದರ್ಶನ್ ಪರ ಘೋಷಣೆ ಕೂಗುತ್ತಿದ್ದಾರೆ. ಈ ಮಧ್ಯೆ ದರ್ಶನ್ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಭೈರೇಶ್ ಹೆಸರಿನ ದರ್ಶನ್ ಅಭಿಮಾನಿ ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಳೆ ದೊಡ್ಡಿಯಲ್ಲಿ ಘಟನೆ ನಡೆದಿದೆ. ತಾವು ಮೆಚ್ಚಿದ ನಾಯಕ ನಟನಿಗೆ ಈ ಪರಿಸ್ಥಿತಿ ಬಂದಿತೆಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಭೈರೇಶ್ ಊಟ ಬಿಟ್ಟಿದ್ದ ಎನ್ನಲಾಗಿದೆ. ದರ್ಶನ್ ಪರಿಸ್ಥಿತಿಗೆ ಸಾಕಷ್ಟು ಮರುಗಿದ್ದ. ಇದರಿಂದಾಗಿ ನಿತ್ರಾಣಗೊಂಡು ಮೋರಿಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರನ್ನು ಪೊಲೀಸರು ಬಂಧಿಸಿದ್ದಾರೆ.