ಮಲಯಾಳಂನ ಸೂಪರ್ ಸ್ಟಾರ್ ಮೋಹನಲಾಲ್ ಅವರ ಆರೋಗ್ಯದಲ್ಲಿ ಏಕಾಏಕಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೋಹನಲಾಲ್ ಅವರಿಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಕೊಚ್ಚಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 64 ವರ್ಷದ ಮೋಹನಲಾಲ್ ಅವರಿಗೆ ತೀವ್ರ ಜ್ವರ, ಮೈ-ಕೈ ನೋವು ಜೊತೆಗೆ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಗುಜರಾತ್ ಗೆ ತೆರಳಿದ್ದ ಮೋಹನಲಾಲ್ ಚಿತ್ರೀಕರಣ ಮುಗಿಸಿಕೊಂಡು ಇತ್ತೀಚೆಗಷ್ಟೆ ಕೊಚ್ಚಿಗೆ ಮರಳಿದ್ದರು. ವಯಸ್ಸಾದ ಹಿನ್ನೆಲೆಯಲ್ಲಿ ಜ್ವರ ಕಾಣಿಸಿಕೊಂಡಿದೆ. ಆದರೆ, ಜ್ವರ ಏರುತ್ತ ಸಾಗಿದೆ. ಅಲ್ಲದೇ, ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಂಡಿದೆ. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
ಮೋಹನಲಾಲ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆ, 65 ವರ್ಷ ವಯಸ್ಸಿನ ಮೋಹನಲಾಲ್ ಅವರಿಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ತೀವ್ರ ಜ್ವರ, ಉಸಿರಾಟದಲ್ಲಿ ಸಮಸ್ಯೆ ಮತ್ತು ಮಾಂಸಖಂಡಗಳಲ್ಲಿ ನೋವು ಕಾಣಿಸಿಕೊಂಡಿದೆ. ಶ್ವಾಸಕೋಶದ ಸೋಂಕು ಆಗಿರುವ ಅನುಮಾನ ಇದೆ. ಹೀಗಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಐದು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.
ಮೋಹನಲಾಲ್ ‘ಲುಸಿಫರ್ 2’ ಸಿನಿಮಾದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.