ಆರ್ ಸಿಬಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಂಗಳೂರಿನ RCB ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ್ದ ದುರ್ಘಟನೆಯ ಸಂಬಂಧವಾಗಿ ತನ್ನ ಹೊಣೆಗೇಡಿ ಆಡಳಿತದ ವೈಫಲ್ಯವನ್ನು ಮರೆಮಾಚಿಕೊಳ್ಳಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರ ಅಮಾನತು ಆದೇಶವನ್ನು ನ್ಯಾಯಾಲಯ ರದ್ದುಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ.
ಪ್ರಚಾರದ ತೆವಲಿಗಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಹಠಕ್ಕೆ ಬಿದ್ದು ತೆಗೆದು ಕೊಂಡ ಅವಿವೇಕಿ ನಿರ್ಧಾರದಿಂದಾದ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ ತನಿಖೆಯನ್ನು ದಿಕ್ಕು ತಪ್ಪಿಸಲು ಕೈಗೊಂಡ ನಿರ್ಧಾರವನ್ನು ಕೇಂದ್ರೀಯ ಆಡಳಿತ್ಮಾಕ ನ್ಯಾಯಾಧಿಕರಣ ವಜಾಗೊಳಿಸಿದೆ. ಅಮಾಯಕ ಜೀವಗಳನ್ನು ಬಲಿ ಪಡೆದುಕೊಂಡರೂ ಭಂಡತನದ ಪರಮಾವಧಿ ಪ್ರದರ್ಶಿಸುತ್ತಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅಮಾಯಕ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಆದೇಶ ಹಿಂಪಡೆದು, ಅಧಿಕಾರಿಗಳ ಕ್ಷಮೆ ಯಾಚಿಸಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತೇನೆ! ಎಂದು ಟ್ವೀಟ್ ನಲ್ಲಿ ಆಗ್ರಹಿಸಿದ್ದಾರೆ.