ಬೆಂಗಳೂರು : ಕೆಲಸ ಮಾಡುತ್ತಿದ್ದ ಮನೆಯಲ್ಲೇ ಮಹಿಳೆಯೊಬ್ಬಳು ಚಿನ್ನಾಭರಣ ಕದಿಯುತ್ತಿದ್ದ ಪ್ರಕರಣ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತೆಯನ್ನು ತಮಿಳುನಾಡು ಮೂಲದ ದೀಪ ಎಂದು ಗುರುತಿಸಲಾಗಿದೆ.
ದೀಪ, ಕೋಣನಕುಂಟೆ ನಿವಾಸಿ ಜಗದೀಶ್ ಎಂಬವರ ಮನೆಯಲ್ಲಿ ಸುಮಾರು ಒಂದು ವರ್ಷದಿಂದ ಮನೆಕೆಲಸ ಮಾಡುತ್ತಿದ್ದಳು. ಕೆಲಸ ಮಾಡುತ್ತಲೇ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಒಂದೇ ಬಾರಿ ಕಳವು ಮಾಡದೇ, ಆಗಾಗ ಒಂದೊಂದೇ ಆಭರಣವನ್ನು ಕದ್ದುಕೊಂಡು ಹೋಗುತ್ತಿದ್ದಳು.
ಮನೆಯಲ್ಲಿದ್ದ ಚಿನ್ನಾಭರಣ ಕಾಣೆಯಾಗುತ್ತಿರುವುದು ಗಮನಿಸಿದ ಜಗದೀಶ್ ಅವರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೃತ್ಯವನ್ನು ದೀಪ ಒಪ್ಪಿಕೊಂಡಿದ್ದಾಳೆ. ಕದ್ದ ಹಣದಿಂದ ತಮಿಳುನಾಡಿನಲ್ಲಿ ಸೈಟ್ ಖರೀದಿ ಮಾಡಿರುವುದಾಗಿ ವಿಚಾರಣೆ ವೇಳೆ ಬಹಿರಂಗವಾಗಿದೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆಕೆಯಿಂದ ಸುಮಾರು 200 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಮಹಿಳೆಯ ಸರ ಕಸಿದು ಓಡ್ತಿದ್ದ ಕಳ್ಳನನ್ನು 1 ಕಿಮೀ ಬೆನ್ನತ್ತಿ ಹಿಡಿದ ಕಾನ್ಸ್‌ಟೇಬಲ್ | ಕಮಿಷನರ್ ಶ್ಲಾಘನೆ



















