ಮತದಾರ ನೀಡಿದ ಅಧಿಕಾರ ಕೆಲವೊಮ್ಮೆ ಸರ್ವಾಧಿಕಾರ, ಪರಮಾಧಿಕಾರದ ಆತಂಕ ತಂದರೆ, ಕೆಲವೊಮ್ಮೆ ಉಲ್ಲಾಸ ನೀಡಿದ್ದುಂಟು. ಈ ಶ್ರೇಷ್ಠ ಸಂವಿಧಾನ ಜೇಬಿನ ವಸ್ತುವಾಗುತ್ತಿರುವುದು ಕೂಡ ವಿಷಾದನೀಯ. ಸಂವಿಧಾನ ನಮ್ಮ ಭಾರತಾಂಬೆಯ ಆತ್ಮ. ಅದು ದೇಶದ ಪ್ರಥಮ ಪ್ರಜೆಗೂ ಹಾಗೂ ಕೊನೆಯ ಪ್ರಜೆಗೂ ಸಮಾನ ಅವಕಾಶ, ಸ್ಥಾನ ಮಾನ ಕಲ್ಪಿಸಿದೆ. ನೂರೈವತ್ತು ಕೋಟಿ ಜನರನ್ನೂ ಭಾರತ ಮಾತೆ ಸಂವಿಧಾನದ ಮೂಲಕ ಸಮಾನವಾಗಿ ಪ್ರೀತಿಸುತ್ತಿದ್ದಾಳೆ ಎಂಬ ಸಂಕೇತವೇ ಈ ಸಂವಿಧಾನ. ಆದರೆ, ಈಗ ಸಂವಿಧಾನದ ತಿದ್ದುಡಪಡಿಯ ವಿಚಾರ ರಾಜಕೀಯ ಪಡಸಾಲೆಯ ಗದ್ದಲಕ್ಕೆ ಕಾರಣವಾಗುತ್ತಿರುವುದು ನೋವಿನ ಸಂಗತಿ.
ಸ್ವಾತಂತ್ರ್ಯ, ಹಕ್ಕುಗಳು, ಕರ್ತವ್ಯಗಳು, ಸರ್ಕಾರ ಬದಲಾದಾಗೊಮ್ಮೆ ಬದಲಾಗುತ್ತ ಸಾಗುತ್ತಿವೆ. ಇಲ್ಲಿಯವರೆಗೆ ಸಂವಿಧಾನಕ್ಕೆ ಬರೋಬ್ಬರಿ 106 ಬಾರಿ ತಿದ್ದು ಪಡಿ ತರಲಾಗಿದೆ. ವಿಶ್ವದಲ್ಲೇ ಅತೀ ಹೆಚ್ಚು ತಿದ್ದುಪಡಿಗಳನ್ನು ಕಂಡ ಸಂವಿಧಾನ ಯಾವುದಾದರೂ ಇದ್ದರೆ, ಅದು ನಮ್ಮ ಸಂವಿಧಾನ. ಸಂವಿಧಾನ ತಿದ್ದುಪಡಿಗೆ ಮೊದಲು ಕೈ ಹಾಕಿದ್ದು ದೇಶ ಕಂಡ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು. ಆ ತಿದ್ದುಪಡಿಯ ಮೂಲಕ ನೆಹರು ನೇತೃತ್ವದ ಸಂಪುಟವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿತು. ಆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಮಾತುಗಳ, ದೇಶದ ಭದ್ರತೆಗೆ ಧಕ್ಕೆ ತರುವಂತಹ ಹೇಳಿಕೆಗಳ ವಿರುದ್ಧ ನಿರ್ಬಂಧ ಹೇರಲಾಯಿತು. ಇದಕ್ಕೆ ಹಲವಾರು ಕಾನೂನುಗಳಿವೆ. ನ್ಯಾಯಾಂಗ ಇದನ್ನು ನೋಡಿಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕರು ಈ ತಿದ್ದುಪಡಿ ತರುವುದನ್ನು ವಿರೋಧಿಸಿದರೂ ನೆಹರು ಮಾತ್ರ ತಿದ್ದಪಡಿ ತಂದರು. ಅಲ್ಲಿಂದ ಆರಂಭವಾದ ತಿದ್ದುಪಡಿಯ ಸಂಪ್ರದಾಯ ಇಲ್ಲಿಯವರೆಗೆ 106ಕ್ಕೆ ಬಂದು ನಿಂತಿದೆ.
ಹೌದು! ಲೋಕಸಭೆಯ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂವಿಧಾನಕ್ಕೆ ತಿದ್ದುಪಡಿ ತರುವುದು ಕಾಂಗ್ರೆಸ್ ಗೆ ಅಂಟಿದ ಚಟ. ನೆಹರು ಅವರ ಕಾಲದಿಂದಲೂ ಕಾಂಗ್ರೆಸ್ ಗೆ ಸಂವಿಧಾನ ತಿದ್ದುಪಡಿ ಮಾಡುವುದು ಒಂದು ಚಟವಾಗಿ ಬಿಟ್ಟಿದೆ ಎಂದು ಹೇಳಿದ್ದೇ ತಡ ಈಗ ಈ ವಿಷಯ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಸಂವಿಧಾನ ತಿದ್ದುಪಡಿ ಆಗಿರುವುದು ಕೇವಲ ದೇಶವನ್ನು ಹಾಗೂ ಜನರನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕೆ ಆಗಿದೆ ಎಂದರೆ ಅದು ತಪ್ಪು. ಹಲವು ಬಾರಿ ಹಲವರಿಗೆ ಈ ತಿದ್ದುಪಡಿಗಳು ನ್ಯಾಯ ಹಾಗೂ ನೆಮ್ಮದಿ ನೀಡಿವೆ. ಬಹುಮುಖ್ಯವಾಗಿ 1951ರಲ್ಲಿ ಮೊದಲ ಬಾರಿಗೆ ಪರಿಶಿಷ್ಟ ಜಾತಿ, ಪಂಗಡದವರು ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರಿಯಲು ಅವಕಾಶ ಕಲ್ಪಿಸಲಾಯಿತು. 1956ರಲ್ಲಿನ 7ನೇ ತಿದ್ದುಪಡಿಯು ಭಾಷೆ ಆಧಾರದಲ್ಲಿ ರಾಜ್ಯಗಳ ವಿಭಜನೆಯೊಂದಿಗೆ ಭಾಷಾವಾರು ಪ್ರಾಂತ್ಯಗಳ ವಿಭಜನೆಯೊಂದಿಗೆ ಕೇಂದ್ರಾಡಳಿತ ಪ್ರದೇಶ ರಚಿಸಲಾಯಿತು.
ದೇಶದಲ್ಲಿ ವಿವಾದಾತ್ಮಕ ತಿದ್ದುಪಡಿಗಳಿಗೆ ಕಾರಣವಾಗಿದ್ದು ಇಂದಿರಾ ಗಾಂಧಿ ಕಾಲದಲ್ಲಿ. 1975ರ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆಂದು ಅಲಹಾಬಾದ್ ಹೈಕೋರ್ಟ್ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆಯ್ಕೆಯನ್ನೇ ಅನುರ್ಜಿತಗೊಳಿಸಿತು. ಆ ತೀರ್ಪನ್ನು ಅರಗಿಸಿಕೊಳ್ಳದ ನಾಯಕಿ, ತೀರ್ಪನ್ನು ಹತ್ತಿಕ್ಕುವ ಸಲುವಾಗಿಯೇ ಎಂಬಂತೆ ಸಂವಿಧಾನದಡಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ವಿರುದ್ಧ ಚುನಾವಣಾ ತಕರಾರು ಎತ್ತುವಂತಿಲ್ಲ ಎಂದು ತಿದ್ದುಪಡಿ ತಂದರು. ಆಗ ಸುಪ್ರಿಂಕೋರ್ಟ್ ಅದನ್ನು ಅಸಂವಿಧಾನಿಕವೆಂದು ರದ್ದುಗೊಳಿಸಿತ್ತು. ಆದರೂ ಸುಮ್ಮನಾಗದ ಇಂದಿರಾ ಗಾಂಧಿ, 1977ರಲ್ಲಿ ದೇಶ ಕಂಡು ಕೇಳರಿಯದ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿ ಬಿಟ್ಟರು.
ಆ ಮೂಲಕ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗುವಂತೆ ನಡೆದುಕೊಂಡು ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳನ್ನೇ ಕಸಿದುಕೊಂಡರು. ಆಗ ದೇಶದಲ್ಲಿ ಅರಾಜಕತೆ ಉಂಟಾಯಿತು. ಇಂದಿರಾ ವಿರೋಧಿಗಳೆಲ್ಲ ಬೀದಿಗಿಳಿದು ಹೋರಾಡಿ, ಜೈಲು ಪಾಲಾದರು. ಇತಿಹಾಸವೇ ಹೇಳುವಂತೆ ಅದು ಕೂಡ ಅವರಿಗೆ ಸಮಾಧಾನ ನೀಡಲಿಲ್ಲ. ಮುಂದುವರೆದ ಇಂದಿರಾ ಗಾಂಧಿ ಸಂವಿಧಾನ ಪಿಠಿಕೆಗೆ ಕೈ ಇಟ್ಟರು. ಸಮಾಜವಾದಿ, ಜಾತ್ಯತೀತ ಮತ್ತು ಸಮಗ್ರತೆ ಪದಗಳನ್ನು ಪಿಠಿಕೆಯಡಿ ತಂದರು. ಆ ಮೂಲಕ ಸಂವಿಧಾನದ ಮೂಲಕ್ಕೆ ಧಕ್ಕೆ ಮಾಡಿದರೆಂಬ ಆರೋಪಿಪದಡಿ ಮತ್ತೆ ಇಂದಿರಾಗಾಂಧಿ ವಿರುಧೋ ಹೋರಾಟ ನಡೆದವು. ದೇಶದಲ್ಲಿ ಮತ್ತೆ ಅರಾಜಕತೆ, ಕ್ರಾಂತಿ ಉಂಟಾಯಿತು.
ಹೌದು…ಇಂದಿರಾ ಗಾಂಧಿ ಅವಧಿಯಲ್ಲಾದ ಆ ದುರಂತಗಳಲ್ಲಿ ಅಸಂಖ್ಯಾತ ಜನರು ನೋವು ಪಟ್ಟಿದ್ದರು ಎನ್ನಲಾಗಿದೆ. ಹೀಗಿಗ ಇಂದಿರಾ ಗಾಂಧಿ ನೇತೃತ್ವದ ಪಕ್ಷವನ್ನು ಜನರು, ತುರ್ತು ಪರಿಸ್ಥಿತಿಯ ನಂತರ ಎದುರಾದ ಚುನಾವಣೆಯಲ್ಲಿ ಮಕಾಡೆ ಮಲಗಿಸಿದರು. ಪರಿಣಾಮ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಆ ವೇಳೆ ಇಂದಿರಾ ಗಾಂಧಿ ಮಾಡಿದ್ದ ಬಹುತೇಕ ತಿದ್ದುಪಡಿಗಳನ್ನು ನಿರಶನಗೊಳಿಸಲಾಯಿತು. ಮೂಲಭೂತ ಹಕ್ಕು, ಮಾನವ ಹಕ್ಕು, ರಕ್ಷಣೆಗೆ ಕ್ರಮ ಕೈಗೊಂಡು ಕಾರ್ಯಾಂಗ, ಶಾಸಕಾಂಗದ ಅಧಿಕಾರ ದುರ್ಬಳಕೆಗೆ ಕಡಿವಾಣ ಹಾಕಲಾಯಿತು.
ಹಾಗೆಯೇ 1989ರಲ್ಲಿ 61ನೇ ತಿದ್ದುಪಡಿ ಮೂಲಕ ಮತದಾರರ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು. ಪಿ.ವಿ. ನರಸಿಂಹರಾವ್ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಮೂಲಾಗ್ರ ಬದಲಾವಣೆಗಳನ್ನು ತಂದರು.
ದೇಶದ ಈಗಿನ ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲೂ ಕೆಲವು ತಿದ್ದುಪಡಿಗಳನ್ನು ತರಲಾಗಿದೆ. 2013ರಲ್ಲಿ 371ಜೆ ಸೇರ್ಪಡೆ ಮಾಡಿ ಹಿಂದುಳಿದ ಪ್ರದೇಶದ ಅಭಿವೃದ್ಧಿಯ ಕೂಗಿಗೆ ಪ್ರಧಾನಿ ಮೋದಿ ಮಾನ್ಯತೆ ಹಾಗೂ ಮನ್ನಣೆ ನೀಡಿದರು. ಹೈದರಾಬಾದ್ ಕರ್ನಾಟಕ ಕೂಡ ಈ ವಿಶೇಷ ಮಾನ್ಯತೆ ಪಡೆಯುತ್ತಿದೆ. 2016ರಲ್ಲಿ ಸಂವಿಧಾನಕ್ಕೆ 101ನೇ ತಿದ್ದುಪಡಿ ತಂದು ಜಿಎಸ್ ಟಿ ಜಾರಿಗೆ ತಂದರು.
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೆನೆಗುದಿಗೆ ಬಿದ್ದಿದ್ದ. ಮಹಿಳಾ ಮೀಸಲಾತಿಗೆ ಒತ್ತು ನೀಡಿತು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡಬೇಕೆಂದು ತಿದ್ದುಪಡಿ ತರಲಾಯಿತು. ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಕೈ ಹಾಕಲಾಯಿತು.
ಬಂಧಗಳೇ, ತಿದ್ದುಪಡಿಗಳನ್ನು ಯಾವುದೇ ಸರ್ಕಾರ ಮಾಡಲಿ, ಯಾರೇ ಮಾಡಲಿ ಅವು ದೇಶ ಹಾಗೂ ಭಾರತೀಯನಿಗೆ ಗೌರವ, ಸಮಾನ ಹಕ್ಕು ನೀಡುವಂತಾಗಲಿ. ಆದರೆ, ಏಕ ವ್ಯಕ್ತಿಯ ಪೂಜೆ, ಪ್ರತಿಷ್ಠೆ, ಸ್ವಾರ್ಥದ ಬೆನ್ನು ಬಿದ್ದು, ನೂರೈವತ್ತು ಕೋಟಿ ಭಾರತೀಯರ ಮನಸ್ಸಿಗೆ, ಬದುಕಿಗೆ ಘಾಸಿ ಮಾಡದಂತಿರಲಿ. ತಾಯಿ ಭಾರತಾಂಬೆಯ ಒಬ್ಬನೇ ಒಬ್ಬ ಮಗುವಿಗೂ ಅದು ನೋವು ನೀಡದಂತಿರಲಿ ಎಂಬುವುದು ನಮ್ಮ ಆಶಯ….