ಜೈಪುರ: ಮನುಷ್ಯನ ಭಾವನೆಗಳಿಗೆ ಸ್ಪಂದಿಸುವ, ಹೆಚ್ಚು ಆಪ್ತವಾಗುವ ಪ್ರಾಣಿ ಎಂದರೆ ಅದು ಶ್ವಾನ. ಇದೇ ಕಾರಣಕ್ಕಾಗಿ ಹೆಚ್ಚಿನವರು ಮನೆಯಲ್ಲಿ ಶ್ವಾನ ಸಾಕುತ್ತಾರೆ. ಅದನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ. ಖುಷಿಯಾದಾಗ, ಬೇಜಾರಾದಾಗ ಆ ಶ್ವಾನದ ಜತೆ ಆಟವಾಡುತ್ತಾರೆ. ಆದರೆ, ಮನುಷ್ಯನ ಜತೆ ಇಷ್ಟೆಲ್ಲ ಆಪ್ತ ನಂಟು ಹೊಂದಿರುವ ಶ್ವಾನದ ಜತೆ ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬ ಕ್ರೂರವಾಗಿ ನಡೆದುಕೊಂಡಿದ್ದಾನೆ.
ಹೌದು, ರಾಜಸ್ಥಾನದ ಉದಯಪುರದ ಗ್ರಾಮವೊಂದರ ಬಳಿಕ ವ್ಯಕ್ತಿಯು ನಾಯಿಯ ಕೊರಳಿಗೆ ಚೈನ್ ಕಟ್ಟಿದ್ದಾನೆ. ಆ ಚೈನ್ ಅನ್ನು ತನ್ನ ಬೈಕಿಗೆ ಬಿಗಿದಿದ್ದಾನೆ. ಇದಾದ ಬಳಿಕ ಬೈಕ್ ಚಲಾಯಿಸಿಕೊಂಡು ಹೋಗಿದ್ದು, ನಾಯಿಯ ಹೊಟ್ಟೆಗೆ ಭಾರಿ ಗಾಯವಾಗಿದೆ. ಈತನು ಬೈಕಿಗೆ ಶ್ವಾನವನ್ನು ಕಟ್ಟಿ ಎಳೆದುಕೊಂಡು ಹೋದ ಕ್ರೂರ ದೃಶ್ಯದ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾಯಿಯನ್ನು ಬೈಕಿಗೆ ಕಟ್ಟಿ ಎಳೆದುಕೊಂಡು ಹೋಗುತ್ತಿರುವುದನ್ನು ಮಹಿಳೆಯೊಬ್ಬರು ನೋಡಿದ್ದಾರೆ. ಕೂಡಲೇ ಬೈಕ್ ಅಡ್ಡಗಟ್ಟಿ, ನೀನೇನು ಮನುಷ್ಯನೋ, ಪ್ರಾಣಿಯೋ ಎಂದು ದಬಾಯಿಸಿದ್ದಾರೆ. ಅಲ್ಲದೆ, ಈತನ ಕೃತ್ಯವನ್ನು ಬೇರೊಬ್ಬರು ವೀಡಿಯೋ ಮಾಡಿದ್ದಾರೆ. ಮಹಿಳೆಯು ತರಾಟೆಗೆ ತೆಗೆದುಕೊಂಡ ಬಳಿಕ ಕ್ರೂರ ವ್ಯಕ್ತಿಯು ಚೈನಿನಿಂದ ನಾಯಿಯನ್ನು ಬಿಡುಗಡೆ ಮಾಡಿದ್ದಾನೆ.
ತುಂಬ ದೂರದವರೆಗೆ ನಾಯಿಯನ್ನು ಎಳೆದ ಕಾರಣ ನಾಯಿಗೆ ಗಾಯಗಳಾಗಿವೆ. ರಸ್ತೆಯಲ್ಲಿ ರಕ್ತ ಕೂಡ ಚೆಲ್ಲಿದೆ. ವೀಡಿಯೋ ವೈರಲ್ ಆಗುತ್ತಲೇ ಜನ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಕೂಡಲೇ ಈತನನ್ನು ಬಂಧಿಸಬೇಕು. ಈತ ಮನುಷ್ಯನೇ ಅಲ್ಲ, ಕ್ರೂರ ಮೃತ ಎಂದೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.