ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಕೋಪಗೊಂಡು ರಾತ್ರೋ ರಾತ್ರಿ ಯುವತಿಯ ಅಪಾರ್ಟ್ ಮೆಂಟ್ ಗೆ ತೆರಳಿ ಕಾರಿಗೆ ಬೆಂಕಿ ಹಚ್ಚಿರುವ ಘಟನೆಯೊಂದು ನಡೆದಿದೆ.
ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ ಎಂಬಾತನೇ ಈ ಕೃತ್ಯ ಎಸಗಿದ ಪಾಗಲ್ ಪ್ರೇಮಿ. ಈತ ಯುವತಿಯ ಮನೆಗೆ ಹೋಗಿ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಈತ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದ. ಈತನ ಮೇಲೆ ಕೊಲೆ ಯತ್ನ, ದರೋಡೆ, ರಾಬರಿ ಸೇರಿದಂತೆ 18 ಕೇಸ್ ಗಳಿದ್ದವು. ಹಿಂದೆ ಪ್ರಕರಣವೊಂದರಲ್ಲಿ ಪೊಲೀಸರಿಂದ ಕಾಲಿಗೆ ಗುಂಡು ತಿಂದು, ಆಸ್ಪತ್ರೆಗೆ ಕೂಡ ಸೇರಿದ್ದ ಎನ್ನಲಾಗಿದೆ.
ಈತನ ಹಿನ್ನೆಲೆ ಗೊತ್ತಿದ್ದರೂ ಯುವತಿಯೊಬ್ಬಳು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಇತ್ತೀಚೆಗೆ ಯುವತಿ ರೌಡಿ ರಾಹುಲ್‌ನಿಂದ ಅಂತರ ಕಾಯ್ದುಕೊಂಡಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ರಾಹುಲ್, ಭಯ ಮೂಡಿಸಲು ಈ ರೀತಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಭಾನುವಾರ ರಾತ್ರಿ ಸ್ಟಾರ್ ರಾಹುಲ್ ತನ್ನ ಸಹಚರರನ್ನು ಕರೆದುಕೊಂಡು ಎರಡು ಕಾರು ಹಾಗೂ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾನೆ. ಮೊದಲು ಚೆಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಬಳಿ ಇರುವ ಮನೆ ಎದುರು ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ. ನಂತರ ಸುಬ್ರಮಣ್ಯಪುರದ ಶ್ರೀನಿಧಿ ಅಪಾರ್ಟ್‌ಮೆಂಟ್ ಹತ್ತಿರ ಹೋಗಿ, ಅಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.
ಸುಮಾರು ನಾಲ್ವರು ಲಾಂಗು, ಮಚ್ಚು ಹಿಡಿದುಕೊಂಡು ಬಂದು, ಸೆಕ್ಯೂರಿಟಿಗೆ ಹೆದರಿಸಿದ್ದಾರೆ. ಆನಂತರ ಒಳಗೆ ನುಗ್ಗಿ ಆ ಯುವತಿಯ ಫೋಟೋ ತೋರಿಸಿದ್ದಾರೆ. ಆಕೆಯ ಕಾರು ಯಾವುದು ಎಂದು ಕೇಳಿದ್ದಾರೆ. ಬಳಿಕ ಒಳಗಡೆ ಹೋಗಿ, ಕಾರಿನ ಗ್ಲಾಸ್ ಒಡೆದು ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ಅಪಾರ್ಟ್ ಮೆಂಟ್ ನಲ್ಲಿ 40ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿದ್ದು, ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು, ದೂರು ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.