ಖತರ್ನಾಕ್ ಖದೀಮ ದಂಪತಿಯನ್ನು ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ದಂಪತಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ಚಿನ್ನಾಭರಣ ಎಗರಿಸಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಜೀವನ್ ಅಲಿಯಾಸ್ ಜೀವ (30), ಪತ್ನಿ ಆಶಾ (30) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದವರು ಎನ್ನಲಾಗಿದೆ. ಬಂಧಿತರಿಂದ 17 ಲಕ್ಷ ರೂ. ಮೌಲ್ಯದ 240 ಗ್ರಾಂ ಚಿನ್ನಾಭರಣ, 90 ಗ್ರಾಂ ಬೆಳ್ಳಿ ಜಪ್ತಿ ಮಾಡಲಾಗಿದೆ. ಬಂಧಿತ ದಂಪತಿ ವಿರುದ್ಧ ದರೋಡೆ, ಕೊಲೆ, ಕೊಲೆ ಯತ್ನ ಸೇರಿದಂತೆ 15 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಜೀವನ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಆಶಾ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯರನ್ನು ಗುರುತಿಸುತ್ತಿದ್ದಳು. ಆನಂತರ ಇಬ್ಬರೂ ಸೇರಿ ಕೃತ್ಯ ಎಸಗುತ್ತಿದ್ದರು. ಆನಂತರ ಜ್ಯುವೆಲರಿ ಅಂಗಡಿಗೆ ತೆರಳಿ ಕಷ್ಟ ಇದೆ ಎಂದು ಹೇಳಿ ಮಾರಾಟ ಮಾಡುತ್ತಿದ್ದರು. ಬಂದ ಹಣದಿಂದ ಮೋಜು-ಮಸ್ತಿ ಮಾಡುತ್ತಿದ್ದರು. ಈಗ ದಂಪತಿಯನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
2024ರ ಫೆ.13ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರದಲ್ಲಿ ವೃದ್ಧೆ ಭಾಗ್ಯಮ್ಮ ಎಂಬುವವರ ಕೊಲೆ ನಡೆದಿತ್ತು. ಕೊಲೆಯ ನಂತರ ಸಂಪ್ ನಲ್ಲಿ ಮೃತದೇಹ ಹಾಕಿ ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಇದೇ ರೀತಿ ಮತ್ತೊಂದು ಕೃತ್ಯ ಎಸಗುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.