ಕೊಪ್ಪಳ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವೊಂದು ಮೂಢನಂಬಿಕೆಗೆ(Superstition) ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಈ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಅಗರಬತ್ತಿಯಿಂದ ಸುಟ್ಟರೆ ಗುಣವಾಗುತ್ತದೆ ಎಂಬ ನಂಬಿಕೆಯಿಂದ ತಾಯಿ ಅಗರಬತ್ತಿಯಿಂದ ಸುಟ್ಟಿದ್ದರಿಂದಾಗಿ ಅದು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
7 ತಿಂಗಳ ಮಗು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಹೀಗಾಗಿ ಕುಟುಂಬಸ್ಥರು ಮಗುವನ್ನು ಕಂಡ ಕಂಡಲ್ಲಿ ತೋರಿಸಿದ್ದಾರೆ. ಆದರೂ ಮಗು ಗುಣಮುಖವಾಗಿಲ್ಲ. ಆದರೆ, ಯಾರೋ ಹೇಳಿದ ಮಾತನ್ನು ನಂಬಿದ ತಾಯಿ, ಅಗರಬತ್ತಿಯ ಬೆಂಕಿಯಿಂದ ಬಿಸಿ ಸುಟ್ಟರೆ ವಾಸಿಯಾಗುತ್ತದೆ ಎಂಬ ನಂಬಿಕೆಯಿಂದ ಅದನ್ನು ಪ್ರಯೋಗ ಮಾಡಿದ್ದಾರೆ. ಹೀಗಾಗಿ ಮಗುವಿಗೆ ಸುಟ್ಟಗಾಯಗಳಿಂದ ನಂಜಾಗಿ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗು ಸಾವನ್ನಪ್ಪುತ್ತಿದ್ದಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ವೈದ್ಯರಿಗೆ ಸುಟ್ಟ ಗಾಯಗಳು ಕಾಣಿಸಿವೆ. ಕೂಡೃಲೇ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಮಟ್ಟದ ಶಿಶುಮರಣ ಪರಿಶೀಲನಾ ಸಭೆ ವೇಳೆ ಈ ವಿಷಯ ಗಮನಕ್ಕೆ ಬಂದಿದೆ. ಊದಿನಕಡ್ಡಿಯಿಂದ ಸುಟ್ಟಿದ್ದಕ್ಕೆ ನಂಜಾಗಿ ಮಗು ಸಾವನ್ನಪ್ಪಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೇಳಿದ್ದಾರೆ. ಸದ್ಯ ತಾಯಿಯ ವಿರುದ್ಧ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ.