ತಮಿಳುನಾಡು- ಸೌತ್ ಸಿನಿಮಾ ಇಂಡಸ್ಟ್ರಿ ಒಂದು ದೊಡ್ಡ ಸಮುದ್ರವಿದ್ದಂತೆ..! ಇಲ್ಲಿ ಸ್ವಿಮ್ ಮಾಡೋಕೆ ನಿಜಕ್ಕೂ ಅದರದ್ದೇ ಆದ ತಯಾರಿ ಇರ್ಲೇಬೇಕು. ಮಾಡು ಇಲ್ಲವೇ ಮಡಿ ಎಂಬ ಪ್ರಿನ್ಸಿಪಲ್ ಇಟ್ಕೊಂಡ್ರೆ ಮಾತ್ರ ಯುದ್ಧದಲ್ಲಿ ಗೆಲ್ಲೋಕೆ ಸಾಧ್ಯ. ಇದೀಗ ಜ.9ಕ್ಕೆ ಅಂತಹದ್ದೇ ಒಂದು ಬಿಗ್ ಬಾಕ್ಸ್ ಆಫೀಸ್ ವಾರ್ ಸೃಷ್ಟಿಯಾಗಿಬಿಟ್ಟಿದೆ. ‘ಜನನಾಯಗನ್ VS ರಾಜಾಸಾಬ್‘ ಎಂಬ ದೊಡ್ಡ ಫ್ಯಾನ್ಸ್ ಹೋರಾಟ ಭಾರತೀಯ ಚಿತ್ರರಂಗದ ಹಾಟ್ ಟಾಪಿಕ್ ಆಗಿಬಿಟ್ಟಿದೆ..!
ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ರಿಲೀಸ್ ಆಗೋದು, ದೊಡ್ಡ ವಿಷಯವಲ್ಲ ಅಂತ ಮೂಗು ಮುರಿದರೂ, ಈ ಸಲ ಲೆಕ್ಕಾಚಾರಗಳು,ವರ್ಚಸ್ಸುಗಳು ಬೇರೆನೆ ಇವೆ. 2026ರ ಆರಂಭವೇ ಇಬ್ಬರು ಬಿಗ್ ಸ್ಟಾರ್‌ಗಳ ಮಧ್ಯೆ ಕಾಂಪಿಟೇಶನ್ ಬಿಸಿ ಹುಟ್ಟಿಸಿದೆ. ಜ.9ಕ್ಕೆ ಜನನಾಯಗನ್ ಮತ್ತು ರಾಜಾಸಾಬ್ ಒಟ್ಟಿಗೆ ಬರ್ತಿರೋದನ್ನೇ ಅಭಿಮಾನಿಗಳಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಯಾಕಂದ್ರೆ ಇಬ್ಬರಿಗೂ ಅವರದ್ದೇ ಆದ ಮಾರ್ಕೆಟ್ ಇದೆ. ಅಭಿಮಾನಿ ಸಾಗರವೂ ಇದೆ. ಯಾಕೆ ಬೇಕಿತ್ತು ಈ ಉಸಿರುಗಟ್ಟಿಸೋ ಸ್ಪರ್ಧೆ ಎಂಬ ಆತಂಕದಲ್ಲೇ ಫ್ಯಾನ್ಸ್ ಜ.9ಕ್ಕೆ ರೆಡಿಯಾಗ್ತಿದ್ದಾರೆ.
‘ಜನನಾಯಗನ್’ ವಿಜಯ್ ದಳಪತಿ ಅಭಿನಯದ ಕೊನೆಯ ಸಿನಿಮಾ ಎನ್ನುತ್ತಲೇ ಹೈಪ್ ಗಿಟ್ಟಿಸಿಕೊಳ್ತಿದೆ. ಇದು ವಿಜಯ್‌ಗೆ ಡಿಸಿಷನ್ ಮೇಕಿಂಗ್ ಹೆಜ್ಜೆ..! ಇತ್ತ ಸಿನಿಮಾನೂ ಗೆಲ್ಲಬೇಕು, ಅತ್ತ ರಾಜಕೀಯ ಸಿದ್ದಾಂತಗಳು ಹೊಸ ರೂಪ ಪಡೆದುಕೊಳ್ಳಬೇಕು ಎಂಬುದೇ ವಿಜಯ್ ಟಾರ್ಗೆಟ್ ಪಾಯಿಂಟ್. ‘ಜನನಾಯಗನ್’ ವಿಜಯ್ ಅಭಿಮಾನಿಗಳಿಗೆ ಕೇವಲ ಸಿನಿಮಾವಾಗಿ ಉಳಿದಿಲ್ಲ. ವಿಜಯ್ ರನ್ನ ಕೊನೆ ಬಾರಿ ತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳೋದಕ್ಕೆ ದಳಪತಿ ಸೇನೆ ವೇಟ್ ಮಾಡ್ತಿದೆ. ವಿಜಯ್ ಈ ಸಿನಿಮಾವನ್ನೇ ತಮ್ ಮುಂದಿನ ಪಾಲಿಟಿಕ್ಸ್ ಮೈಲೇಜ್ ಆಗಿ ಬಳಸಿಕೊಳ್ತಿದ್ದಾರೆ. ಸಿನಿಮಾರಂಗಕ್ಕೆ ವಿದಾಯ ಹೇಳಿರೋ ವಿಜಯ್, ಜನನಾಯಗನ್ ಚಿತ್ರವನ್ನ ತಮ್ಮ ಬ್ರಹ್ಮಾಸ್ತ್ರವಾಗಿ ಬಿಡ್ತಿದ್ದಾರೆ. ವಿಜಯ್ ಒಬ್ಬ ಕಾಮನ್ ಮ್ಯಾನ್ ಆಗಿ ಕಾಣಿಸಿಕೊಂಡು ನಂತರ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯೋ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ ಎಂಬುದಂತೂ ಈಗ ಬಿಟ್ಟಿರೋ ಮೇಕಿಂಗ್ ಹಾಗೂ ಟ್ರೈಲರ್‌ನಲ್ಲೇ ಗೊತ್ತಾಗುತ್ತೆ.
‘ದಿ ರಾಜಾಸಾಬ್’ ಡಾರ್ಲಿಂಗ್ ಪ್ರಭಾಸ್‌ಗೆ ಎಕ್ಸಾಮ್ ಬರೆದಂತೆ..! ಹಿಂದೆಂದೂ ಕಾಣದ ಅವತಾರದಲ್ಲಿ ಪ್ರಭಾಸ್ ಇಲ್ಲಿ ಹಾಜರಾಗಿದ್ದಾರೆ. ಸಲಾರ್ ಮತ್ತು ಕಲ್ಕಿ ನಂತ್ರ ಡಾರ್ಲಿಂಗ್ ಭಕ್ತಗಣ ತುದಿಗಾಲಲ್ಲಿ ನಿಂತು ಕಾಯ್ತಿರೋ ಐಟಂ ಈ ‘ರಾಜಾಸಾಬ್’. ಒಂದು ಹಾರರ್ ಕಾಮಿಡಿಯಲ್ಲಿ ಪ್ರಭಾಸ್ ಕಾಣಿಸಿಕೊಂಡಿರಲಿಲ್ಲ. ಪ್ರಭಾಸ್ ಜೊತೆ ಇಲ್ಲಿ ಬಾಲಿವುಡ್ ಖಳನಾಯಕ್ ಸಂಜುಬಾಬಾ ಬೇರೆ ಇದ್ದಾರೆ. ಪ್ರಭಾಸ್ ಎಂಟ್ರಿಗೆ ಡಿಮ್ಯಾಂಡ್ ಎಷ್ಟಿದೆ ಎಂಬುದು ಹೈದ್ರಾಬಾದ್ ಸರ್ಕಲ್ ಗಮನಿಸಿದ್ರೆ ಸಾಕು..!
ರಾಜಾಸಾಬ್‌ಗೆ ಹೋಲಿಸಿದ್ರೆ ಜನನಾಯಗನ್ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗ್ತಿದೆ. ಹಾಗಂತ, ಸ್ಪರ್ಧೆ ಇಲ್ಲ ಅಂತಲ್ಲ. ಪ್ರಭಾಸ್ ಫ್ಯಾನ್ಸ್ ಫ್ಲೋ ನೋಡ್ತಿದ್ರೆ, ಓಪನಿಂಗ್ ವಿಚಾರದಲ್ಲಿ ಕೆಮ್ಮಂಗಿಲ್ಲ. ಇತ್ತ ವಿಜಯ್ ಕೊನೆ ಸಿನಿಮಾಗೆ ತಮಿಳುನಾಡು ಚಿತ್ರಮಂದಿರಗಳು ರೆಡಿಯಾಗಿವೆ. ಎರಡಕ್ಕೂ ಅಡ್ವಾನ್ಸ್ ಬುಕಿಂಗ್‌ನಲ್ಲಿ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿದೆ. ವಿಜಯ್ ಮತ್ತು ಪ್ರಭಾಸ್ ಮುಖಾಮುಖಿಯಾಗ್ತಿರೋದು ಇದೇ ಮೊದಲು..! ಹಾಗಾಗಿ, ಥಿಯೇಟರ್‌ನಲ್ಲಿ ಇಬ್ಬರಿಗೂ ಯಾವ ರೆಸ್ಪಾನ್ಸ್ ಸಿಗುತ್ತೆ ಎಂಬುದೇ ಸದ್ಯಕ್ಕೆ ಸುಲಭವಾಗಿ ಅಂದಾಜು ಮಾಡೋಕೆ ಆಗ್ತಿಲ್ಲ..!
ಸಿನಿಮಾ ಅನ್ನೋದು ಒಂದು ಕ್ಲೀನ್ ಬಿಸ್ನೆಸ್..! ಒಳ್ಳೆ ಕಂಟೆಂಟ್ ಕೊಟ್ರೆ ಸಿನಿಮಾ ನಿಲ್ಲುತ್ತೆ. ಇಲ್ಲವಾದ್ರೆ, ಅದು ತಿಂದು ಕೈ ಒರೆಸೋ ಪೇಪರ್ ನಂತಾಗುತ್ತೆ. ಸದ್ಯಕ್ಕೆ ಎರಡೂ ಸಿನಿಮಾಗಳ ಫೇಸ್ ಆಫ್ ಇಂಡಸ್ಟ್ರಿಗೆ ಭರವಸೆಗಳ ಜೊತೆಗೆ ಸ್ಟಾರ್ ಕದನದ ಸೂಚನೆಯನ್ನೂ ಕೊಡ್ತಿದೆ. ಪ್ರಭಾಸ್ ಫ್ಯಾನ್ಸ್ ‘ಜನನಾಯಗನ್’ ನೋಡ್ತಾರಾ? ವಿಜಯ್ ಸೇನೆ ‘ರಾಜಾಸಾಬ್’ಗೆ ಅಸ್ತು ಅಂತಾರಾ..? ‘ಪ್ರಭಾಸ್ VS ವಿಜಯ್’ ವಾರ್ ಸಿನಿಮಾಗಷ್ಟೇ ಸೀಮಿತವಾಗಿರಲಿ ಎಂಬುದೇ ಎಲ್ಲರ ಕಾಳಜಿ..!
ಇದನ್ನೂ ಓದಿ : ಮಾರ್ಪಡಿಸಿದ ವಿಲ್ಲಿಸ್ ಜೀಪ್‌ನಲ್ಲಿ ಸಂಜಯ್ ದತ್ ಮಿಂಚು : ಮರುಕಳಿಸಿದ ಹಳೆಯ ನೆನಪುಗಳು



















