ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಉದ್ಯಮಿಯೊಬ್ಬರು ಜೀವ ಬೆದರಿಕೆಯ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಉದ್ಯಮಿ ವಿಜಯ್ ಟಾಟಾ ಎಂಬುವವರು ದೂರು ದಾಖಲಿಸಿದ್ದಾರೆ. ವ್ಯವಹಾರಿಕವಾಗಿ ತಾವು ಮುನ್ನಡೆ ಸಾಧಿಸಿದ್ದು, ತಮಗೆ ಕೇಂದ್ರ ಸಚಿವರು ಬೆದರಿಕೆ ಹಾಕಿದ್ದಾರೆ. 50 ಕೋಟಿ ರೂ. ನೀಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಹಣಕ್ಕಾಗಿ ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ವಿರುದ್ಧವೂ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿ ಅಂದೇ, ಅಮೃತ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಆ. 24ರಂದು ರಾತ್ರಿ ಮನೆಗೆ ಬಂದಿದ್ದ ರಮೇಶ್ ಗೌಡ, ಚನ್ನಪಟ್ಟಣ ವಿಧಾನಸಭಾ ಚುನಾವಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಟಿಕೆಟ್ ಫೈನಲ್ ಎಂದು ರಮೇಶ್ ಗೌಡ ಹೇಳಿದ್ದರು. ಆಗ ರಮೇಶಗೌಡ ಅವರ ಮೊಬೈಲ್ ಗೆ ಕುಮಾರಸ್ವಾಮಿ ಅವರ ಕರೆ ಬಂತು. ನಂತರ ಹಣಕ್ಕೆ ಒತ್ತಾಯ ಮಾಡಲಾಯಿತು. ಅಷ್ಟೊಂದು ಹಣ ನನ್ನಿಂದ ಕೊಡಲು ಆಗುವುದಿಲ್ಲ. ನಾನೂ ಸ್ವಲ್ಪ ಸಮಸ್ಯೆಯಲ್ಲಿದ್ದೇನೆ ಎಂದು ಹೇಳಿದೆ. ಆದರೆ, ಅವರು ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ ಎಂದು ವಿಜಯ್ ಟಾಟಾ ಆರೋಪಿಸಿದ್ದಾರೆ.