ಬೆಂಗಳೂರು: ಮದರಸಾದಲ್ಲಿ ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿರುವ ಆರೋಪವೊಂದು ಇತ್ತೀಚೆಗೆ ಕೇಳಿ ಬಂದಿತ್ತು. ಈಗ ಪೊಲೀಸರ ತನಿಖೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ.
ಇಲ್ಲಿಯ ಥಣಿಸಂದ್ರ ಬಳಿ ಇರುವ ಮದರಸಾದಲ್ಲಿ ಈ ದೌರ್ಜನ್ಯ ಆರೋಪ ಕೇಳಿ ಬಂದಿತ್ತು. ಜಾಮಿಯಾ ಆಯಿಷಾ ಸಿದ್ದಿಕಾ ಅಲಿ ಬನಾತ್ ಎಂಬ ಮದರಸಾದ ಮೇಲೆ ಆರೋಪ ಕೇಳಿ ಬಂದಿತ್ತು. ಈ ಮದರಸಾದಲ್ಲಿ ಬಾಲಕಿಯರ ಮೇಲೆ ಹಲ್ಲೆ ಮಾಡುವ ದೃಶ್ಯ ವೈರಲ್ ಆಗಿತ್ತು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಮ್ಮದ್ ಹಸನ್ ಎಂಬ ಆರೋಪಿಯನ್ನು ಬಂಧಿಸಿದ್ದರು. ಈ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೇ ರೀತಿ ಇನ್ನೂ ಹಲವು ಪ್ರಕರಣಗಳು ನಡೆದಿರುವ ವಿಚಾರ ಗೊತ್ತಾಗಿದೆ. ಹಿಂದೆ ಈ ಮದರಸಾದಲ್ಲಿ ಐದಾರು ದೌರ್ಜನ್ಯದ ಘಟನೆಗಳು ನಡೆದಿರುವ ಕುರಿತು ಮಾಹಿತಿ ಸಿಕ್ಕಿದೆ.
ಹೀಗಾಗಿ ಈ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ದೌರ್ಜನ್ಯ ಸಂಬಂಧ ಮಾಹಿತಿ ನೀಡಿದ್ದ ವಕೀಲ ಹಸನ್ ಹಾಗೂ ದೌರ್ಜನ್ಯಕ್ಕೊಳಗಾದ ಮಕ್ಕಳ ಪೋಷಕರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ, ದೂರು ಕೊಡಲು ಮುಂದಾಗಿರುವ ಪೋಷಕರಿಗೆ ಬೆದರಿಕೆಯ ಕರೆಗಳು ಕೂಡ ಬರುತ್ತಿವೆ ಎನ್ನಲಾಗಿದೆ. ಈಗ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್ ಐಆರ್ ದಾಖಲಿಸಲು ಮುಂದಾಗಿದ್ದಾರೆ.