ತುಮಕೂರು: ನಡು ರಸ್ತೆಯಲ್ಲೇ ಕಾರು ಹೊತ್ತಿ ಉರಿದಿರುವ ಘಟನೆ ನಡೆದಿದೆ.
ತುಮಕೂರು ಕಡೆಯಿಂದ ಹೊಸದುರ್ಗ ಮಾರ್ಗವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಈ ಘಟನೆ ಗುಬ್ಬಿ ತಾಲ್ಲೂಕಿನ ಎಚ್ಎಎಲ್ ಘಟಕದ ಮುಂದಿನ ಯಲ್ಲಾಪುರ ಗೇಟ್ ಬಳಿ ನಡೆದಿದೆ.
ಕಾರು ಮಾಲಿಕ ಹೇಮಂತ್ ಸೇರಿದಂತೆ ಮತ್ತೋರ್ವ ಪ್ರಯಾಣಿಕ ತುಮಕೂರು ಮಾರ್ಗದಿಂದ ತಮ್ಮ ಸ್ವಗ್ರಾಮ ಹೊಸದುರ್ಗ ಬಳಿಯ ಶ್ರೀರಾಮಪುರ ಎಂಬಲ್ಲಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ಕೆಳಗೆ ಇಳಿದಿದ್ದಾರೆ. ಕಾರು ಧಗಧಗನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಮತ್ತು ಗುಬ್ಬಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಭೇಟಿ ನೀಡಿ, ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ಕುರಿತು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















